ಕನ್ನಡಪ್ರಭವಾರ್ತೆ, ಬೇಲೂರು
2026-27ನೇ ಸಾಲಿನಲ್ಲಿ ಒಟ್ಟು 16.57 ಕೋಟಿ ರು. ಆದಾಯ ನಿರೀಕ್ಷಿಸಲಾಗಿದ್ದು, 25.22 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಪ್ರಾರಂಭಿಕ ಶಿಲ್ಕು ಸೇರಿಸಿ 98.20 ಲಕ್ಷ ರು. ಉಳಿತಾಯ ಸಾಧಿಸುವಂತೆ ಬಜೆಟ್ ರೂಪಿಸಲಾಗಿದೆ ಎಂದು ವಿವರಿಸಿದರು.
ಆದಾಯದ ಪ್ರಮುಖ ಮೂಲಗಳಲ್ಲಿ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ನೀರು ಸರಬರಾಜು, ಮಾರುಕಟ್ಟೆ, ಪರವಾನಗಿ ಹಾಗೂ ವಿವಿಧ ಸೇವಾ ಶುಲ್ಕಗಳು ಸೇರಿವೆ. ಸರ್ಕಾರದ ಅನುದಾನಗಳು ಕೂಡ ಪ್ರಮುಖ ಆದಾಯದ ಮೂಲವಾಗಿವೆ. ವೆಚ್ಚದ ಭಾಗದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಜೊತೆಗೆ ಕುಡಿಯುವ ನೀರಿನ ಯೋಜನೆಗಳು, ಪೈಪ್‌ಲೈನ್ ವ್ಯವಸ್ಥೆ, ಟ್ಯಾಂಕ್‌ಗಳ ನಿರ್ಮಾಣ, ನೈರ್ಮಲ್ಯ ಹಾಗೂ ಘನ ತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಮಾರುಕಟ್ಟೆ ಹಾಗೂ ಉದ್ಯಾನ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಇದಲ್ಲದೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವೇತನ, ವಿದ್ಯುತ್ ವೆಚ್ಚ, ನೀರು ಸರಬರಾಜು ನಿರ್ವಹಣೆ, ಸ್ವಚ್ಛ ಭಾರತ್ ಯೋಜನೆ ಸೇರಿ ವಿವಿಧ ನಿಯಮಿತ ವೆಚ್ಚಗಳಿಗೆ ಅಗತ್ಯ ಮೀಸಲಾತಿ ಮಾಡಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ಸದಸ್ಯ ಬಿ. ಗಿರೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯ, ನಿಯಂತ್ರಣದ ಕೊರತೆ ಹಾಗೂ ಸಾರ್ವಜನಿಕ ಸೇವೆಗಳ ದೌರ್ಬಲ್ಯವನ್ನು ಖಂಡಿಸಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆಯೇ ಇಲ್ಲ. ಸಂಜೆ 5 ಗಂಟೆ ನಂತರ ಕಚೇರಿಯಲ್ಲಿ ಅಧಿಕಾರಿಗಳು ಲಭ್ಯವಿರುವುದಿಲ್ಲ ಎಂದು ಆರೋಪಿಸಿದರು. ರಸೀದಿ ಸಂಗ್ರಹ, ದಾಖಲೆ ನಿರ್ವಹಣೆ ಸೇರಿ ಮೂಲಭೂತ ಕಾರ್ಯಗಳಲ್ಲಿಯೂ ನಿರ್ಲಕ್ಷ್ಯ ಕಂಡುಬರುತ್ತಿದೆ. ಅಗತ್ಯವಿದ್ದರೆ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡುವುದಾಗಿ ಎಚ್ಚರಿಸಿದರು. ಸದಸ್ಯ ಶಾಂತಕುಮಾರ್ ಮಾತನಾಡಿ, ಕಳಪೆ ಕಾಮಗಾರಿಗಳ ಬಗ್ಗೆ ಪ್ರತೀ ಸಭೆಯಲ್ಲೂ ಚರ್ಚೆ ಆಗುತ್ತದೆ. ಆದರೆ ಯಾರಿಗೂ ಶಿಕ್ಷೆ ಆಗೋದಿಲ್ಲ. ಹೊಣೆಗಾರಿಕೆ ನಿಗದಿ ಮಾಡದೇ ಇದ್ದರೆ ಇಂತಹ ಚರ್ಚೆಗಳಿಗೆ ಅರ್ಥವೇ ಇಲ್ಲ ಎಂದರು. ಸಭೆ ಗಂಭೀರತೆಯನ್ನೂ ಪ್ರಶ್ನಿಸಿದ ಅವರು, “ಬಜೆಟ್ ಮಂಡನೆಗೆ ಸಮಯ ನಿಗದಿ ಮಾಡಿದರೂ ಸದಸ್ಯರು ಹಾಜರಾಗುವುದಿಲ್ಲ. ಕೋರಂ ಆಗುವವರೆಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಜಾತ್ರಾ ಮಹೋತ್ಸವದ ಹಿನ್ನೆಲೆ ಮೂಲಭೂತ ಸೌಕರ್ಯಗಳ ಕೊರತೆಯನ್ನೂ ಸದಸ್ಯರು ಉಲ್ಲೇಖಿಸಿ ಕುಡಿಯುವ ನೀರು, ಶೌಚಾಲಯ, ತಾತ್ಕಾಲಿಕ ಗುಡಾರಗಳ ವ್ಯವಸ್ಥೆ ತಕ್ಷಣ ಕಲ್ಪಿಸಬೇಕು. ಬಸ್ ನಿಲ್ದಾಣ ಮತ್ತು ವ್ಯಾಪಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲೂ ಗೊಂದಲವಿದೆ ಎಂದು ಆರೋಪಿಸಿದರು.ಭಕ್ತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಈ ವರ್ಷ ಶುಲ್ಕ ವಿನಾಯಿತಿ ನೀಡಬೇಕು ಮತ್ತು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.