ಶಿಕಾರಿಪುರ: ಭಾರತ ದೇಶ ಕೇವಲ ಕಲ್ಲು, ಮಣ್ಣು, ಭೂಮಿ ಹೊಂದಿರುವ ಜಡ ವಸ್ತುವಲ್ಲ. ಜನ್ಮನೀಡಿದ ತಾಯಿಗೆ ಸರಿಸಮಾನವಾಗಿರುವ ಭಾರತಾಂಭೆಯನ್ನು ಪೂಜಿಸುವ, ಪ್ರೀತಿಸುವ ಬಹು ಮಹತ್ವದ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೊಡಗಿಸಿಕೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ದೇಶ ಕಾಯುವ ಯೋಧ ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರ ನೆಮ್ಮದಿಯ ಬದುಕಿಗಾಗಿ ತನ್ನ ಜೀವನವನ್ನು ಮೀಸಲಿಟ್ಟಿದ್ದು, ಇದೇ ಮಾದರಿಯಲ್ಲಿ ರಾ.ಸ್ವಂ.ಸೇ ಸಂಘ ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ಸಂಘದ ವಿಚಾರಧಾರೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇಶ ಸೇವೆಗೆ ದೊರೆತ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಸಮರ್ಪಣೆಗೈದ ಹಲವರ ರಕ್ತಸಿಕ್ತ ಬದುಕು, ಹುತಾತ್ಮರಾದವರ ಜೀವನದ ಮೌಲ್ಯವನ್ನು ಜನತೆಗೆ ತಲುಪಿಸಲು ರಾ.ಸ್ವಂ.ಸೇ ಸಂಘ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಸಂಘವನ್ನು ಹೆಮ್ಮರವಾಗಿ ಕಟ್ಟಲು ಕೈಜೋಡಿಸುವಂತೆ ಕರೆ ನೀಡಿದರು.ಶತಮಾನೋತ್ಸವದ ಅಂಗವಾಗಿ ಪಥಸಂಚಲನ, ಮನೆಮನೆ ಸಂಪರ್ಕ, ಪ್ರತಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವದ ಗುರಿ ಹೊಂದಲಾಗಿದ್ದು, ಇವುಗಳನ್ನು ಯಶಸ್ವಿಗೊಳಿಸುವ ಮೂಲಕ ಭಾರತಾಂಬೆಯ ಸೇವೆ ಸಲ್ಲಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಳೇರಕೇರಿಯಲ್ಲಿನ ಮನೆಮನೆಗೆ ಭೇಟಿ ನೀಡಿ ಸಂಪರ್ಕ ಅಭಿಯಾನಕ್ಕೆ ಸಂಸದ ರಾಘವೇಂದ್ರ ಚಾಲನೆ ನೀಡಿದರು.
ರಾ.ಸ್ವಂ.ಸೇ ಸಂಘದ ತಾ.ಭೌದ್ದಿಕ್ ಪ್ರಮುಖ ಶರತ್, ನಗರ ಕಾರ್ಯವಾಹ ಉಮೇಶ್, ತಾ.ವ್ಯವಸ್ತಾ ಪ್ರಮುಖ್ ವೀರಣ್ಣ, ವಿಶ್ವನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಡಾ.ಭೂಕಾಂತ್, ಸುಧೀರ ಮಾರವಳ್ಳಿ, ವೀರನಗೌಡ, ಪಿಳಿಪಿಳಿ ಗಿಡ್ಡಪ್ಪ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಎಸ್.ರಾಘವೇಂದ್ರ, ಮಂಜು ಸಿಂಗ್, ಯೋಗೀಶ್ ಮಡ್ಡಿ, ಗುರುರಾಜ ಜಗತಾಪ್, ಲೀಲಾವತಿ ಮತ್ತಿತರರಿದ್ದರು.