ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ, ಹಾವೇರಿ
ರಾಣಿಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿಯಲ್ಲಿ ಜನಿಸಿದ ಲಮಾಣಿ, ವಿದ್ಯಾರ್ಥಿ ಜೀವನದಲ್ಲಿಯೇ ಸಾರ್ವಜನಿಕ ಚಟುವಟಿಕೆಗಳತ್ತ ಒಲವು ಬೆಳೆಸಿಕೊಂಡರು. ಬಿ.ಎ. ಹಾಗೂ ಎಲ್‌ಎಲ್‌ಬಿ ಪದವೀಧರರಾದ ಅವರು 1980ರ ದಶಕದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಅವರು, ಬಳಿಕ ಕೆಪಿಸಿಸಿ ಸದಸ್ಯ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪಕ್ಷದ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ಸಂಘಟನಾ ನಾಯಕನಾಗಿ ಗುರುತಿಸಿಕೊಂಡರು.1999ರಲ್ಲಿ ಬ್ಯಾಡಗಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಲಮಾಣಿ, 2013ರಲ್ಲಿ ಹಾವೇರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2016ರಿಂದ 2018ರವರೆಗೆ ಜವಳಿ ಹಾಗೂ ಮುಜರಾಯಿ ಸಚಿವರಾಗಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಆಡಳಿತಾತ್ಮಕ ಅನುಭವ ಗಳಿಸಿದರು.2023ರ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಮರು ಆಯ್ಕೆಯಾದ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಪಕ್ಷವು ಅವರನ್ನು ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಸದನದ ಕಾರ್ಯನಿರ್ವಹಣೆಯಲ್ಲಿ ಪ್ರದರ್ಶಿಸಿದ ಸಂಯಮ, ಆಡಳಿತಾನುಭವ ಹಾಗೂ ಪಕ್ಷದ ಮೇಲಿನ ನಿಷ್ಠೆಗೆ ಮನ್ನಣೆ ನೀಡಿದ ಹೈಕಮಾಂಡ್ ಇದೀಗ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದೆ.ಜಿಲ್ಲೆಯ ನಿರೀಕ್ಷೆ ಹೆಚ್ಚಳ: ಬರ, ನೀರಾವರಿ, ಕೃಷಿ, ಕೈಗಾರಿಕೆ, ಉದ್ಯೋಗ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಸಚಿವರಾಗಿರುವ ಲಮಾಣಿ ಅವರು ಹೆಚ್ಚಿನ ಅನುದಾನ ಹಾಗೂ ಮಹತ್ವದ ಯೋಜನೆಗಳನ್ನು ತಂದು ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ನೀಡುವರೆಂಬ ನಿರೀಕ್ಷೆ ಜನರಲ್ಲಿ ಮೂಡಿದೆ.ರುದ್ರಪ್ಪ ಲಮಾಣಿ ಒಂದು ನೋಟಜನನ: 1 ಜೂನ್ 1959ಜನ್ಮಸ್ಥಳ: ಖಂಡೇರಾಯನಹಳ್ಳಿ, ರಾಣೆಬೆನ್ನೂರು ತಾಲ್ಲೂಕುವಿದ್ಯಾರ್ಹತೆ: ಬಿ.ಎ., ಎಲ್‌ಎಲ್‌ಬಿಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್1999: ಬ್ಯಾಡಗಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕ2013, 2023: ಹಾವೇರಿ ಕ್ಷೇತ್ರದಿಂದ ಶಾಸಕ2016–2018: ಜವಳಿ ಹಾಗೂ ಮುಜರಾಯಿ ಸಚಿವಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಸೇವೆ2026: ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಬಂಜಾರ ಸಮಾಜದ ಏಕೈಕ ಶಾಸಕ▪ ಕಾಂಗ್ರೆಸ್‌ನ ಬಂಜಾರ ಮುಖ: ರಾಜ್ಯ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಬಂಜಾರ (ಲಂಬಾಣಿ) ಸಮುದಾಯದ ಏಕೈಕ ಶಾಸಕರಾಗಿರುವ ರುದ್ರಪ್ಪ ಲಮಾಣಿ, ಪಕ್ಷದ ಸಾಮಾಜಿಕ ನ್ಯಾಯದ ಸಮೀಕರಣದಲ್ಲಿ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆರಂಭವಾದಾಗಿನಿಂದಲೇ ಅವರ ಹೆಸರು ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿತ್ತು.▪ ಸಂಘಟನೆಯಿಂದ ಸಚಿವ ಸಂಪುಟದವರೆಗೆ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿರುವ ಲಮಾಣಿ, ನಿಷ್ಠಾವಂತ ಹಾಗೂ ಅನುಭವಿ ನಾಯಕರಾಗಿ ತಮ್ಮದೇ ಆದ ಸ್ಥಾನ ಗಳಿಸಿದ್ದಾರೆ.▪ ಅನುಭವಿ ಶಾಸಕ: 1999ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹಾವೇರಿ ಜಿಲ್ಲೆಯ ರಾಜಕೀಯದಲ್ಲಿ ಸ್ಥಿರ ನಾಯಕತ್ವದ ಛಾಪು ಮೂಡಿಸಿದ್ದಾರೆ.▪ ಉಪಸಭಾಧ್ಯಕ್ಷರಿಂದ ಸಚಿವರ ತನಕ: 2023ರಲ್ಲಿ ಸಚಿವ ಸ್ಥಾನ ತಪ್ಪಿ ಉಪಸಭಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಲಮಾಣಿ, ಇದೀಗ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಮೂಲಕ ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಮತ್ತೊಂದು ಮಹತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಂತ್ರಿ ರೇಸ್‌ನಲ್ಲಿ ಮಾನೆ, ಶಿವಣ್ಣನವರಿಗೆ ನಿರಾಸೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಾವೇರಿ ಜಿಲ್ಲೆಯ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆತಿದ್ದರೆ, ಸಚಿವ ಸ್ಥಾನದ ರೇಸ್‌ನಲ್ಲಿ ಬಲವಾಗಿ ಕೇಳಿಬಂದಿದ್ದ ಶ್ರೀನಿವಾಸ ಮಾನೆ ಹಾಗೂ ಬಸವರಾಜ ಶಿವಣ್ಣನವರ ಅವರಿಗೆ ನಿರಾಸೆಯಾಗಿದೆ.ಇಬ್ಬರೂ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಪಕ್ಷದ ಹಿರಿಯ ನಾಯಕರ ಮೂಲಕ ಕೊನೆಯ ಕ್ಷಣದವರೆಗೂ ತಮ್ಮ ಪರವಾಗಿ ಲಾಬಿ ನಡೆಸಿದ್ದರು. ಹಾನಗಲ್ ಕ್ಷೇತ್ರದಿಂದ ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಶ್ರೀನಿವಾಸ ಮಾನೆ ಅವರ ಅನುಭವ ಹಾಗೂ ಬ್ಯಾಡಗಿ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಿರುವ ಬಸವರಾಜ ಶಿವಣ್ಣನವರ ಅವರ ಸಂಘಟನಾ ಸಾಮರ್ಥ್ಯ ಸಚಿವ ಸ್ಥಾನದ ಪರಿಗಣನೆಯಲ್ಲಿ ಪ್ರಮುಖ ಅಂಶಗಳಾಗಿದ್ದವು.ಆದರೆ ಅಂತಿಮ ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ಹಾಗೂ ಪ್ರಾದೇಶಿಕ ಸಮೀಕರಣಗಳಿಗೆ ಆದ್ಯತೆ ನೀಡಿದ ಪರಿಣಾಮ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆಯಿತು. ಇದರಿಂದ ಮಾನೆ ಮತ್ತು ಶಿವಣ್ಣನವರ ಬೆಂಬಲಿಗರಲ್ಲಿ ನಿರಾಸೆ ಮೂಡಿದೆ.