ಕನಕಗಿರಿ: ಕನಕಗಿರಿ (ಸುವರ್ಣಗಿರಿ)ಯ ಪುಣ್ಯ ಭೂಮಿಯಲ್ಲಿ ಶಿಕ್ಷಣ ಕ್ಷೇತ್ರ ಶ್ರೀಮಂತವಾಗಲು ಲಿಂ. ರುದ್ರಮುನಿಸ್ವಾಮಿಗಳ ಶ್ರಮ ಅವಿಸ್ಮರಣೀಯ ಎಂದು ಅಮಿನಗಡ ಗಚ್ಚಿನಮಠದ ಶಂಕರ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಆನಂತರ ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ, ರುದ್ರಸ್ವಾಮಿಗಳ ೨೨ನೇ ವರ್ಷದ ಪುಣ್ಯಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದಕ್ಕೆ ಸಂತೋಷವಾಗಿದೆ. ರುದ್ರಸ್ವಾಮಿಗಳಂತಹ ಶರಣರು ಕನಕಗಿರಿ ಮಠಕ್ಕೆ ಗುರುಗಳಾಗಿ ಬಂದು ಶಿಕ್ಷಣದ ಜತೆಗೆ ಅನೇಕ ಸಮಾದ ಸೇವೆ ಮಾಡಿರುವುದು ನಿಜಕ್ಕೂ ಮೆಚ್ಚುವಂಥದ್ದು. ಶ್ರೀಗಳ ಕಾಯಕದ ಶ್ರಮ ಹಾಗೂ ಅವರ ಸೇವೆ ನಮ್ಮೆಲ್ಲರಿಗೂ ಆದರ್ಶವಾಗಿವೆ ಎಂದರು.
ಸುವರ್ಣಗಿರಿ ಶ್ರೀ ರುದ್ರಸ್ವಾಮಿಗಳ ಸಮೂಹ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಕಟ್ಟಡದ ಮೊದಲನೇ ಮಹಡಿ ಹಾಗೂ ಕಿಡ್ಸ್ ಪ್ಲೆ ಗ್ರೌಂಡ್‌ನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಭಯ್ಯಾಪುರ ಉದ್ಘಾಟಿಸಿದರು. ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ರುದ್ರಸ್ವಾಮಿಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದರು.ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳು ಸಂಘದ ರಚನೆಗಾಗಿ ಡಾ. ಚನ್ನಮಲ್ಲ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಯಿತು. ಪುಣ್ಯಸ್ಮರಣೋತ್ಸವ ಅಂಗವಾಗಿ ರುದ್ರಸ್ವಾಮಿ ಗದ್ದುಗೆಗೆ ಅಭಿಷೇಕ, ಅಲಂಕಾರ, ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಶಾಲಾ ಮಕ್ಕಳು ಹಾಗೂ ನೂರಾರು ಭಕ್ತರು ರುದ್ರಸ್ವಾಮಿಗಳ ಕರ್ತೃ ಗದ್ದುಗೆ ದರ್ಶನ ಪಡೆದರು. ಶ್ರೀಮಠದಿಂದ ಭಕ್ತರಿಗೆ ಹೋಳಿಗೆ ತುಪ್ಪ, ಪಲ್ಯ ಹಾಗೂ ಅನ್ನ ಸಾಂಬಾರ ವ್ಯವಸ್ಥೆ ಮಾಡಲಾಗಿತ್ತು.