ಕಾರಟಗಿ ಪಟ್ಟಣದ ಶ್ರೀ ಆರಾಧ್ಯದೈವ ಶ್ರೀ ಶರಣ ಬಸವೇಶ್ವರರ 52ನೇ ವರ್ಷದ ಪುರಾಣ ಪ್ರವಚನದ ಅಂಗವಾಗಿ ಸ್ಥಳೀಯ ಶ್ರೀ ಶರಣ ಬಸವೇಶ್ವರ ಪುರಾಣ ಸಮಿತಿ ವತಿಯಿಂದ ಭಾನುವಾರ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು.

ಕಾರಟಗಿ: ಗ್ರಾಮೀಣ ಪ್ರದೇಶದಲ್ಲಿ ಶ್ರಾವಣ ಹಾಗೂ ಕಾರ್ತಿಕ ಮಾಸಗಳಲ್ಲಿ ನಡೆಯುವ ಪುರಾಣ ಪ್ರವಚನಗಳ ಸಂದರ್ಭದಲ್ಲಿ ಆಯೋಜಿಸುವ ಸಾಮೂಹಿಕ ವಿವಾಹಗಳಿಂದ ಬಡಜನರಿಗೆ ಅನುಕೂಲವಾಗಿದ್ದು, ಇಂತಹ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿವೆ ಎಂದು ಬುಕ್ಕಸಾಗರದ ಸಂಸ್ಥಾನಮಠದ ಕರಿಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಶ್ರೀ ಆರಾಧ್ಯದೈವ ಶ್ರೀ ಶರಣ ಬಸವೇಶ್ವರರ 52ನೇ ವರ್ಷದ ಪುರಾಣ ಪ್ರವಚನದ ಅಂಗವಾಗಿ ಸ್ಥಳೀಯ ಶ್ರೀ ಶರಣ ಬಸವೇಶ್ವರ ಪುರಾಣ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹ ಎಂದರೆ ಕೇವಲ ಬಡ ಜನರ ವಿವಾಹ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರ ಧಾರ್ಮಿಕ ಸ್ಥಳದಲ್ಲಿ ಸಹಸ್ರಾರು ಭಕ್ತರು, ಗುರುಹಿರಿಯರು ಹಾಗೂ ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಭಾಗ್ಯ ಹಾಗೂ ಜೀವನದ ಸಾರ್ಥಕತೆಯ ಕ್ಷಣವಾಗಿದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರಿತು, ಸಹಬಾಳ್ವೆ ನಡೆಸಿದಾಗ ಮಾತ್ರ ಕುಟುಂಬ ಜೀವನಕ್ಕೆ ಅರ್ಥ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮರುಳಸಿದ್ಧಯ್ಯ ಹಿರೇಮಠ ಮಾತನಾಡಿ, ವೈದಿಕ ಸಂಪ್ರದಾಯಕ್ಕಿಂತ ವೈಚಾರಿಕ ಚಿಂತನೆ ಮೌಲ್ಯಯುತವಾದುದು. ಜಾತಿಗಿಂತ ನೀತಿ ಹಾಗೂ ಮಾನವೀಯತೆ ದೊಡ್ಡದು. ಮೂಢನಂಬಿಕೆಗಳಿಗೆ ಕಟ್ಟುಬೀಳದೆ ಆದರ್ಶ ಜೀವನ ನಡೆಸಬೇಕು. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಾಧಿಸಲು ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಎಲ್ಲೆಡೆ ಹೆಚ್ಚಾಗಿ ಆಯೋಜಿಸಬೇಕು ಎಂದರು.

15 ಜೋಡಿ ನವವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀ ಶರಣ ಬಸವೇಶ್ವರ ದೇವಸ್ಥಾನದಿಂದ ವಾದ್ಯಮೇಳಗಳೊಂದಿಗೆ ನವವಧು-ವರರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಪುರಾಣ ಸಮಿತಿಯ ಪ್ರಮುಖರಾದ ಗುಂಡಪ್ಪ ಕುಳಗಿ, ಕೋಟಗಿ ಮಲ್ಲಿಕಾರ್ಜುನ, ಜಗದೀಶಪ್ಪ ಅವರಾದಿ, ಶಿವರೆಡ್ಡಿ ನಾಯಕ, ಬೂದಿ ಗಿರಿಯಪ್ಪ, ಚನ್ನಬಸಪ್ಪ ಸುಂಕದ, ಸಿದ್ದರಾಮಪ್ಪ ಪಲ್ಲೇದ, ಅಮರೇಶ ಸಾಲಗುಂದಿ, ಉಮೇಶ ಭಂಗಿ, ಶರಣಪ್ಪ ಗದ್ದಿ, ಅಯ್ಯಪ್ಪ ಉಪ್ಪಾರ, ಬಾಲಪ್ಪ ಆರಾಪುರ, ಯಂಕಪ್ಪ ಹತ್ತಿಕಾಳ, ರುದ್ರೇಶ ಗಣಾಚಾರಿ, ಶರಣಪ್ಪ ದಿವಟರ್, ಗುರುಲಿಂಗಯ್ಯಸ್ವಾಮಿ, ಬಸವರಾಜಸ್ವಾಮಿ ಪಾಲ್ಗೊಂಡಿದ್ದರು.