ಅಹಿಂಸಾ ಪರಮೋ ಧರ್ಮಃ ಎಂಬ ಸಂದೇಶ ಕೇವಲ ಜೈನ ಸಮುದಾಯಕ್ಕೆ ಸೀಮಿತವಾಗಿಲ್ಲ, ಅದು ಇಡೀ ಮಾನವಕುಲಕ್ಕೆ ದಾರಿ ತೋರಿಸುವ ಮಹತ್ವದ ಮೌಲ್ಯವಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಹಿಂಸಾ ಪರಮೋ ಧರ್ಮಃ ಎಂಬ ಸಂದೇಶ ಕೇವಲ ಜೈನ ಸಮುದಾಯಕ್ಕೆ ಸೀಮಿತವಾಗಿಲ್ಲ, ಅದು ಇಡೀ ಮಾನವಕುಲಕ್ಕೆ ದಾರಿ ತೋರಿಸುವ ಮಹತ್ವದ ಮೌಲ್ಯವಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರು ಗ್ರಾಮದಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜೈನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಧರ್ಮವು ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಮಾನವೀಯತೆಯ ಅತ್ಯಂತ ಶ್ರೇಷ್ಠ ಸಂದೇಶ ನೀಡಿದೆ. ಭಗವಾನ್ ಮಹಾವೀರರು ನಿಷ್ಠೆ, ಸತ್ಯ, ತ್ಯಾಗ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕುವ ಸಂದೇಶವನ್ನು ನೀಡಿದ್ದಾರೆ. ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಸಾರಿದರು. ಯೇಸು ಕ್ರಿಸ್ತರು ಪ್ರೀತಿ, ಕ್ಷಮೆ ಮತ್ತು ಶಾಂತಿಯ ಸಂದೇಶ ನೀಡಿದರು. ಪ್ರವಾದಿ ಮೊಹಮ್ಮದ್ ಅವರೂ ಮಾನವೀಯತೆ ಮತ್ತು ಶಾಂತಿಯ ಮಾರ್ಗವನ್ನು ಬೋಧಿಸಿದರು. ಜಗತ್ತಿನ ಎಲ್ಲ ಮಹಾನ್ ಪುರುಷರ ಸಂದೇಶದ ಸಾರ ಒಂದೇ—ಮನುಷ್ಯತ್ವದಿಂದ ಬದುಕಬೇಕು ಎಂಬುದಾಗಿದೆ ಎಂದರು.ಜೈನ ಸಮುದಾಯ ಭವನ ಮತ್ತು ಮುನಿ ನಿವಾಸವು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಬೇಕು. ಮುಂದಿನ ಪೀಳಿಗೆಗೆ ಜೈನ ಧರ್ಮದ ಅಹಿಂಸೆ, ಸತ್ಯ, ತ್ಯಾಗ, ಪ್ರಾಮಾಣಿಕತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಪರಿಚಯಿಸುವ ವೇದಿಕೆಯಾಗಬೇಕು. ಪೂಜ್ಯ ಮುನಿವರ್ಯರ ಆಶೀರ್ವಾದದಿಂದ ಈ ಸ್ಥಳ ಮತ್ತಷ್ಟು ಪವಿತ್ರವಾಗಲಿ ಹಾಗೂ ಜೈನ ಸಮುದಾಯವು ಸಮಾಜದ ಎಲ್ಲ ವರ್ಗಗಳೊಂದಿಗೆ ಬೆರೆತು ಬೆಳಗಾವಿಯ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.ಸಮುದಾಯ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಇಲ್ಲಿ ಎಷ್ಟು ಜನರಿದ್ದಾರೆ?, ಎಷ್ಟು ಮನೆಗಳಿವೆ ಅಥವಾ ಎಷ್ಟು ಮತಗಳಿವೆ ಎಂಬುವುದನ್ನು ತಾವು ವಿಚಾರಿಸಿರಲಿಲ್ಲ. ಸಮುದಾಯದ ಅಗತ್ಯವನ್ನು ಮಾತ್ರ ಪರಿಗಣಿಸಿ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ್ದೇನೆ. ಜಾತಿ, ಪಂಥ, ಭಾಷೆಗಿಂತ ನನಗೆ ಮನುಷ್ಯತ್ವದಲ್ಲಿ ನಂಬಿಕೆ ಇದೆ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯನ್ನೂ ಸಮಾನ ದೃಷ್ಟಿಯಿಂದ ನೋಡುವುದೇ ನನ್ನ ಆಶಯವಾಗಿದೆ ಎಂದು ತಿಳಿಸಿದರು.ನಮ್ಮ ವಯಸ್ಸು ಎಷ್ಟು, ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ, ನಾವು ಮಾಡಿದ ಒಳ್ಳೆಯ ಕೆಲಸ, ಸಮಾಜಕ್ಕೆ ನೀಡಿದ ಕೊಡುಗೆ ನಮ್ಮ ನಂತರವೂ ಉಳಿಯುತ್ತದೆ. ಈ ಕಟ್ಟಡ ಕನಿಷ್ಠ ನೂರು, ಇನ್ನೂರು ವರ್ಷಗಳಾದರೂ ಉಳಿಯಲಿ. ತಮ್ಮ ಹೆಸರು ಕಟ್ಟಡದಲ್ಲಿ ಉಳಿಯುವುದಕ್ಕಿಂತ ತಾವು ಮಾಡಿದ ಕೆಲಸ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂಬುವುದು ಮುಖ್ಯ. ಕೇವಲ ಭಾಷಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಮ್ಮ ಮಾತಿಗಿಂತ ನಮ್ಮ ಕೆಲಸ ಮಾತನಾಡಬೇಕು ಎಂದರು.ಸುಮಾರು ₹50 ಲಕ್ಷ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿರುವುದು ಸಂತಸ ತಂದಿದೆಂದು ಭವನದ ಕಾಮಗಾರಿಯ ಗುಣಮಟ್ಟವನ್ನು ಶ್ಲಾಘಿಸಿದರು.₹70 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಜೈನ ಸಮುದಾಯ ಭವನ ಉದ್ಘಾಟನೆಯ ಬಳಿಕ ಮಣ್ಣೂರು ಗ್ರಾಮದಲ್ಲಿ ಸುಮಾರು ₹70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಚರಂಡಿ, ಸಿಸಿ ಹಾಗೂ ಕಾಂಕ್ರೀಟ್ ರಸ್ತೆಗಳನ್ನು ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಕಾಮಗಾರಿಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಉತ್ತಮ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಜನರ ದೈನಂದಿನ ಬದುಕಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಯುವರಾಜ ಕದಂ, ಉಚಗಾಂವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ಜಯವಂತ ಬಾಳೇಕುಂದ್ರಿ, ಸಾಗರ ಕಟಗೆನ್ನವರ, ರಾಜಶ್ರೀ ಜೈನ್, ಸಂತೋಷ ಕೆಂಚನ್ನವರ್, ಮನೋಹರ್ ಬೆಳಗಾಂವ್ಕರ್, ಮಹಾವೀರ ಕೆಂಚನ್ನವರ್, ಸುಧೀರ್ ಬೋಗಾರ್, ಧರ್ಮೇಂದ್ರ ಕೆಂಚನ್ನವರ್, ಪಾರಿಶ್ ಕಟಗೆನ್ನವರ, ಎಸ್.ಎಲ್.ಚೌಗುಲೆ, ಮುಕುಂದ ತೆರಳೆ, ಅಶೋಕ ಚೌಗುಲೆ ಸೇರಿದಂತೆ ಗ್ರಾಮದ ಪ್ರಮುಖರು, ಮುಖಂಡರು ಹಾಗೂ ಜೈನ ಸಮುದಾಯದವರು ಉಪಸ್ಥಿತರಿದ್ದರು.ಜೈನ ಸಮುದಾಯದ ಜನಸಂಖ್ಯೆ ದೊಡ್ಡದಿಲ್ಲದಿದ್ದರೂ, ಸಮುದಾಯದ ಅಭಿವೃದ್ಧಿಗಾಗಿ ಭವನ ನಿರ್ಮಾಣವಾಗಿರುವುದು ಸಂತೋಷದ ವಿಚಾರ. ಸಮಾಜದ ಅಭಿವೃದ್ಧಿಯನ್ನು ಸಂಖ್ಯೆ ಅಥವಾ ಮತಗಳ ಲೆಕ್ಕಾಚಾರದಲ್ಲಿ ತಾವು ನೋಡುವುದಿಲ್ಲ. ನನಗೆ ಜಾತಿ, ಪಂಥ, ಭಾಷೆ ಇವುಗಳಲ್ಲಿ ನಂಬಿಕೆ ಇಲ್ಲ. ನನಗೆ ಮನುಷ್ಯತ್ವದಲ್ಲಿ ನಂಬಿಕೆ ಇದೆ. ಯಾರು ಯಾವ ಜಾತಿಯವರು, ಯಾವ ಧರ್ಮದವರು, ಯಾವ ಭಾಷೆಯವರು ಎಂಬುವುದಕ್ಕಿಂತ ಅವರು ಒಳ್ಳೆಯ ಮನುಷ್ಯರಾಗಿದ್ದಾರೆಯೇ ಎಂಬುವುದೇ ನನಗೆ ಮುಖ್ಯ.-ಲಕ್ಷ್ಮೀ ಹೆಬ್ಬಾಳಕರ್,
ಮಾಜಿ ಸಚಿವೆ.