ಮದ್ಯ-ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ
ಮದ್ಯ ಮತ್ತು ಮಾದಕವಸ್ತುಗಳು ಭವಿಷ್ಯವನ್ನು ಹಾಳು ಮಾಡುತ್ತವೆ. ಮನಸ್ಸು ನಿಯಂತ್ರಣದಲ್ಲಿದ್ದರೆ ಉತ್ತಮ ಬದುಕು ನಿಮ್ಮದಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ನಗರದ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮದ್ಯಪಾನ ಸಂಯಮ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಮದ್ಯ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಚಟ ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ. ಮನಸ್ಸು ನಿಯಂತ್ರಿಸಿದರೆ ಸಾಕು. ಇದರಿಂದ ಭವಿಷ್ಯದಲ್ಲಿ ಯಶಸ್ಸು ಸಿಗಲಿದೆ. ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು. ಇದಕ್ಕಿಂತ ಮೊಬೈಲ್ ಕೂಡ ಅಷ್ಟೇ ಗೀಳು, ಕೆಟ್ಟದು ಅಂತ ಗೊತ್ತಿದ್ರೂ ಬಳಕೆ ಮಾಡುತ್ತಿದ್ದೇವೆ. ಎಲ್ಲರೂ ಅತ್ಯುನ್ನತ ಅಂಕಗಳಿಸಲು ಇಂತಹ ದುಶ್ಚಟಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಎಸ್ಪಿ ಡಾ. ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ವಯೋಮಾನಕ್ಕೆ ಸಹಜವಾಗಿ ಆಕಾಂಕ್ಷೆಗಳು ಬದಲಾಗುತ್ತವೆ. ಈ ವಯಸ್ಸಿನಲ್ಲಿ ಎಲ್ಲದರ ಬಗ್ಗೆ ಕುತೂಹಲವಿರುತ್ತದೆ. ಇದನ್ನು ಮಾರಾಟ ಮಾಡುವವರು ಬಳಸಿಕೊಳ್ಳುತ್ತಾರೆ. ಇಂತಹ ಜಾಲಗಳಲ್ಲಿ ಒಮ್ಮೆ ಸಿಲುಕಿಕೊಂಡರೆ ನಿಲ್ಲುವುದಿಲ್ಲ. ಮುಂದುವರೆಯುತ್ತಲೇ ಇರುತ್ತದೆ. ಆರೋಗ್ಯ ಹಾಳಾಗುತ್ತದೆ. ಹಣವಿಲ್ಲದಿದ್ದಾಗ ಕಳ್ಳತನ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೀವನ ಹಾಳಾಗುತ್ತದೆ ಎಂದರು.
ಪ್ರಾಚಾರ್ಯ ಡಾ. ನಾರಾಯಣ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಡಾ. ಸೋಮಶೇಖರ್ ಉಪನ್ಯಾಸ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಧನಂಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪನ್ಯಾಸಕ ದೇವಣ್ಣ, ಐಕ್ಯುಎಸಿ ಸಂಯೋಜಕ ಗುರುರಾಜ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಭೋಜರಾಜ್ಮ, ಡಾ. ಷಣ್ಮುಖ ನಾಯ್ಕ, ಡಾ. ಸೋಮಶೇಖರ ಮತ್ತಿತರರಿದ್ದರು.