ಗಣಜೂರಿನಲ್ಲಿ ಚಿನ್ನದ ಗಣಿ ಆರಂಭದ ಸದ್ದು, ರೈತರಲ್ಲಿ ಹೆಚ್ಚಿದ ಆತಂಕ

KannadaprabhaNewsNetwork |  
Published : Jun 27, 2026, 12:45 AM IST
ಹಾವೇರಿ ತಾಲೂಕು ಗಣಜೂರು ಗ್ರಾಮದ ಶಾಲೆ | Kannada Prabha

ಸಾರಾಂಶ

ಹಾವೇರಿ ಸಮೀಪದ ಗಣಜೂರು ಗ್ರಾಮದ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ ಹಚ್ಚಿದ್ದ ಡೆಕ್ಕನ್‌ ಗೋಲ್ಡ್‌ ಮೈನ್ಸ್‌ ಕಂಪನಿಗೆ ಗಣಿಗಾರಿಕೆ ನಡೆಸಲು ಅಗತ್ಯ ಅನುಮತಿ ಸಿಗದೇ ನನೆಗುದಿಗೆ ಬಿದ್ದಿದ್ದ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ತಾಂತ್ರಿಕ ಹಾಗೂ ಕಾನೂನು ತೊಡಕು ನಿವಾರಣೆಯತ್ತ ಕಂಪನಿ ಸಾಗಿದ್ದು, ಚಿನ್ನದ ಗಣಿಗಾರಿಕೆ ಆರಂಭದ ಕುರಿತು ಮತ್ತೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಸಮೀಪದ ಗಣಜೂರು ಗ್ರಾಮದ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ ಹಚ್ಚಿದ್ದ ಡೆಕ್ಕನ್‌ ಗೋಲ್ಡ್‌ ಮೈನ್ಸ್‌ ಕಂಪನಿಗೆ ಗಣಿಗಾರಿಕೆ ನಡೆಸಲು ಅಗತ್ಯ ಅನುಮತಿ ಸಿಗದೇ ನನೆಗುದಿಗೆ ಬಿದ್ದಿದ್ದ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ತಾಂತ್ರಿಕ ಹಾಗೂ ಕಾನೂನು ತೊಡಕು ನಿವಾರಣೆಯತ್ತ ಕಂಪನಿ ಸಾಗಿದ್ದು, ಚಿನ್ನದ ಗಣಿಗಾರಿಕೆ ಆರಂಭದ ಕುರಿತು ಮತ್ತೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.

ಸುಪ್ರೀಂ ಕೋರ್ಟ್‌ ಇತ್ತೀಚಿನ ನೀಡಿದ ಮಹತ್ವದ ಆದೇಶವೊಂದು ಗಣಜೂರು ಚಿನ್ನದ ಗಣಿಗಾರಿಕೆ ನಡೆಸಲು ಕಂಪನಿಗೆ ಮರುಜೀವ ಸಿಕ್ಕಂತಾಗಿದೆ.

ಡೆಕ್ಕನ್ ಗೋಲ್ಡ್ ಮೈನ್ಸ್ ಹಲವು ವರ್ಷಗಳ ಹಿಂದೆಯೇ ಗಣಜೂರು ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಚಿನ್ನದ ನಿಕ್ಷೇಪದ ಕುರಿತು ವ್ಯಾಪಕ ಸಂಶೋಧನೆ ನಡೆಸಿತ್ತು. ಸುಮಾರು 72 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ದೃಢಪಟ್ಟಿತ್ತು. ಇದರ ಸಂಸ್ಕರಣೆ ಹಾಗೂ ಪ್ಲಾಂಟ್ ಸ್ಥಾಪನೆ ಸೇರಿದಂತೆ ಒಟ್ಟಾರೆ ಯೋಜನೆಗೆ ಸುಮಾರು 400 ಎಕರೆಗೂ ಹೆಚ್ಚು ಭೂಮಿಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಕಳೆದ 2015 ಮತ್ತು 2021ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಯಮಾವಳಿಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಈ ಗಣಿಗಾರಿಕೆ ಪರವಾನಗಿ ಅರ್ಜಿಯನ್ನು ತಿರಸ್ಕರಿಸಿದ್ದವು. ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಇಂತಹದ್ದೇ ಗಣಿಗಾರಿಕೆ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಗಣಜೂರು ಯೋಜನೆಗೆ ಪೂರಕವಾಗಿ ಪರಿಣಮಿಸಿದೆ. ಹೀಗಾಗಿ, ಕಂಪನಿಯು ಮುಕ್ತ ಹರಾಜು ಪ್ರಕ್ರಿಯೆ ಅಥವಾ ಕಾಂಪೋಸಿಟ್ ಲೈಸೆನ್ಸ್ ಮೂಲಕ ಗಣಿಗಾರಿಕೆ ಆರಂಭಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

ರೈತರಲ್ಲಿ ಆತಂಕ: ಕೋಳೂರು, ಗಣಜೂರು ಸುತ್ತಮುತ್ತಲಿನ ಕೃಷಿ ಭೂಮಿ ಫಲವತ್ತಾಗಿದೆ. ಈಗಾಗಲೇ ಕೈಗಾರಿಕಾ ಕಾರಿಡಾರ್‌ಗಾಗಿ ಭೂಮಿ ನೀಡಿ ಹಲವು ರೈತರು ಕಂಗಾಲಾಗಿದ್ದಾರೆ. ಈಗ ಚಿನ್ನದ ಗಣಿಗಾರಿಕೆ ಹೆಸರಿನಲ್ಲಿ ಜಮೀನು ಪಡೆದರೆ ನಮ್ಮ ಬದುಕು ಬೀದಿಗೆ ಬೀಳುತ್ತದೆ. ಗಣಿಗಾರಿಕೆಯಿಂದ ಇಡೀ ಗ್ರಾಮದ ಪರಿಸರ ನಾಶವಾಗುವ ಭೀತಿಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಪರವಾನಗಿ ನೀಡಿದರೆ ಗಣಜೂರು ಸುತ್ತಮುತ್ತಲಿನ ಕೃಷಿ ಭೂಮಿಯನ್ನು ಗಣಿಗಾರಿಕೆಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಓಪನ್ ಪಿಟ್ ಮಾದರಿಯ ಗಣಿಗಾರಿಕೆಯಿಂದಾಗಿ ಸುತ್ತಮುತ್ತಲಿನ ವಾತಾವರಣ, ಅಂತರ್ಜಲ ಕಲುಷಿತಗೊಂಡು ಊರೇ ಅವನತಿಯ ಹಾದಿ ಹಿಡಿಯಬಹುದು ಎಂಬುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯರಿಗೆ ಉದ್ಯೋಗದ ಆಸೆ:ಕೃಷಿ ಜಮೀನು ಕೈತಪ್ಪುವ ಆತಂಕ ಕೆಲವರದ್ದಾದರೆ ಒಂದು ವೇಳೆ ಯೋಜನೆ ಜಾರಿಗೆ ಬಂದರೆ ನೂರಾರು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸಿಗಬಹುದು ಎಂಬ ನಿರೀಕ್ಷೆಯೂ ಇದೆ.

ಹಾವೇರಿ ಜಿಲ್ಲೆಯು ಏಲಕ್ಕಿ ನಾಡು ಎಂಬ ಹೆಗ್ಗಳಿಕೆಯಿಂದ ಈಗ ಚಿನ್ನದ ನಾಡು ಎಂಬ ಹೊಸ ಮುದ್ರೆ ಪಡೆಯುವತ್ತ ಸಾಗುತ್ತಿದೆಯಾದರೂ, ಅನ್ನ ನೀಡುವ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರ ಹಿತರಕ್ಷಣೆಯನ್ನು ಸರ್ಕಾರ ಹೇಗೆ ಕಾಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.ಎರಡು ದಶಕದಿಂದ ನನೆಗುದಿಗೆ: ಹಾವೇರಿ ಸಮೀಪದ ಗಣಜೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಡೆಕ್ಕನ್ ಗೋಲ್ಡ್ ಮೈನಿಂಗ್ ಕಂಪನಿ 2003ರಲ್ಲಿಯೇ ಚಿನ್ನದ ನಿಕ್ಷೇಪ ಇರುವುದನ್ನು ಪತ್ತೆ ಹಚ್ಚಿತ್ತು. ಗಣಿಗಾರಿಕೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2014ರ ಜು.24ರಂದೇ ಚಿನ್ನದ ಗಣಿಗಾರಿಕೆಗೆ ಕೇಂದ್ರ ಹಸಿರು ನಿಶಾನೆ ತೋರಿತ್ತು.

2010ರಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಡೆಕ್ಕನ್‌ ಗೋಲ್ಡ್‌ ಮೈನಿಂಗ್‌ ಕಂಪನಿಯು ಚಿನ್ನದ ಗಣಿಗಾರಿಕೆ ಹಾಗೂ ಸಂಸ್ಕರಣಾ ಘಟಕ ಸ್ಥಾಪನೆಗೆ ಒಡಂಬಡಿಕೆ ಮಾಡಿಕೊಂಡಿತ್ತು. 267 ಕೋಟಿ ರು. ಬಂಡವಾಳ ಹೂಡಿಕೆ ಮಾಡುವುದಲ್ಲದೇ ಸುಮಾರು 510 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಭರವಸೆ ನೀಡಿತ್ತು. ಅದಕ್ಕಾಗಿ ಸುಮಾರು 200 ಎಕರೆ ಜಮೀನು ನೀಡುವಂತೆ ಕೇಳಿಕೊಂಡಿತ್ತು. ಆದರೆ, ಅದಾವುದೂ ಅನುಷ್ಠಾನಕ್ಕೆ ಬಂದಿರಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಮಾರಕ ಶಿಲ್ಪಗಳ ಅನಾದರ ಸಲ್ಲದು: ಡಾ. ಮದ್ದಾನಸ್ವಾಮಿ ಯರಬಾಳ
ಪಂಚಮಸಾಲಿಗಳಿಗೆ ರಾಜ್ಯವನ್ನೇ ಆಳುವ ಶಕ್ತಿಯಿದೆ: ಸವಿತಾ ರಮೇಶ