ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ತಾಪಂ ಮಾಜಿ ಸದಸ್ಯ ರವಿಕುಮಾರ್ ಹೇಳಿದರು.
ತುರುವೇಕೆರೆ: ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ತಾಪಂ ಮಾಜಿ ಸದಸ್ಯ ರವಿಕುಮಾರ್ ಹೇಳಿದರು.
ತಾಲೂಕಿನ ಕುರುಬರಹಳ್ಳಿ ಬ್ಯಾಲ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದಂಡಿನಶಿವರ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದ ಜೊತೆಗೆ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ವ್ಯಕ್ತಿತ್ವ ಪರಿಪೂರ್ಣತೆಗೊಳ್ಳಲಿದೆ. ಕ್ರೀಡೆಯು ಮಾನಸಿಕ ಹಾಗೂ ದೈಹಿಕ ಚೈತನ್ಯವನ್ನು ಉಂಟು ಮಾಡಿ, ವಿದ್ಯಾರ್ಥಿಗಳು ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದರು. ಕ್ರೀಡೆಯನ್ನು ಮೈಗೂಡಿಸಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ವೃದ್ದಿಯಾಗುವುದರ ಜೊತೆಗೆ ದೇಹ ಸಂಸ್ಕಾರವೂ ಹೆಚ್ಚಲಿದೆ. ತಾಂತ್ರಿಕ ಶಿಕ್ಷಣದ ಕಡೆ ಹೆಚ್ಚು ಒಲವು ತೋರುವ ಯುವಕರನ್ನು ಕ್ರೀಡಾ ಕ್ಷೇತ್ರದ ಬಗ್ಗೆ ಹೆಚ್ಚಿನ ಅಭಿರುಚಿಯನ್ನು ಹೊಂದುವಂತೆ ಶಿಕ್ಷಕರರು ಮಾಡಬೇಕು. ಕ್ರೀಡೆಯಲ್ಲಿ ಸಾಧನೆ ಮಾಡುವುದರಿಂದ ಉದ್ಯೋಗ, ಗೌರವ ಸಿಗುವುದರ ಜೊತೆಗೆ ದೇಶ ಹಾಗು ರಾಜ್ಯದ ಕೀರ್ತಿಯನ್ನು ಹೆಚ್ಚಿಸಲು ಕ್ರೀಡೆ ಅತ್ಯುತ್ತಮ ವೇದಿಕೆಯಾಗಿದೆ ಎಂದರು. ಮುಖ್ಯಶಿಕ್ಷಕ ಜಯಪ್ರಕಾಶ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆದರೆ ಗೆದ್ದಾಗ ಖುಷಿಪಟ್ಟು, ಸೋತಾಗ ಕುಗ್ಗದೆ ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯನ್ನು ತೋರಬೇಕಿದೆ. ಶಿಕ್ಷಕರು ತಮ್ಮ ಮಕ್ಕಳಿಗೆ ಕೇವಲ ಗೆಲ್ಲುವುದನ್ನು ಮಾತ್ರ ಹೇಳಿಕೊಡದೆ ಸೋತಾಗಲೂ ಅದನ್ನು ಹೇಗೆ ಸಕಾರಾತ್ಮಕವಾಗಿ ಸ್ವೀಕರಿಸಿ ಗೆಲುವಿನ ದಾರಿಗೆ ಯಾವ ರೀತಿ ಸಾಗಬೇಕು ಎಂಬುದರ ಬಗ್ಗೆಯೂ ಮಕ್ಕಳಲ್ಲಿ ಅರಿವು ಮತ್ತು ತರಬೇತಿ ನೀಡಬೇಕು ಎಂದರು.ದಂಡಿನಶಿವರ ಹೋಬಳಿಯ 14 ಶಾಲೆಗಳ ಮಕ್ಕಳು ಕಬ್ಬಡ್ಡಿ, ಶೆಟಲ್ ಕಾಕ್, ಕೊಕ್ಕೋ, ಥ್ರೋಬಾಲ್, ವಾಲಿಬಾಲ್ ಸೇರಿದಂತೆ ಅಥ್ಲೇಟಿಕ್ ವಿಭಾಗಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಇಲ್ಲಿ ಗೆದ್ದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು. ಸಂಪಿಗೆ ಹೊಸಹಳ್ಳಿ ಗ್ರಾಪಂ ಉಪಾಧ್ಯಕ್ಷ ಶಿವರಾಜು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ್ ಕುಮಾರ್, ಪ್ರಥಮ ದರ್ಜೆ ಗುತ್ತಿಗೆದಾರ ಗಂಗರಾಜು, ಶಿವಕುಮಾರ್ ತಾಲೂಕು ಟಿಪಿಇಒ ಸಿದ್ದಪ್ಪ, ನಾಗಪ್ಪ ವಾಲೇಕರ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ತಾಲೂಕು ಅನುದಾನಿತ ಪ್ರೌಢಶಾಲೆಗಳ ಸಂಘ ಅಧ್ಯಕ್ಷ ರಾಜಪ್ಪ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.