ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ಆಯೋಜಿಸಿದ ‘ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊರೋನಾ ನಂತರ ಎಂಎಸ್ಎಂಇಗಳು ಅನಿಶ್ಚಿತತೆಯನ್ನು ಎದುರಿಸುತ್ತಿವೆ. ಭಾರತೀಯ ಸಾಂಪ್ರದಾಯಿಕ ಕೃಷಿ ಆಧಾರಿತ ಉತ್ಪನ್ನ ಹಾಗೂ ಕುಶಲಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ಮೂಲಕ, ತಂತ್ರಜ್ಞಾನ ಬಳಕೆ, ಹೇರಳ ಹೂಡಿಕೆ ಮೂಲಕ ಎಂಎಸ್ಎಂಇಗಳನ್ನು ಸರಕಾರಗಳು ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಗಾಂಧೀಜಿ ಅವರು ಹಳ್ಳಿಗಳ ಉದ್ಧಾರ ಮುಖ್ಯವೆಂದು ಭಾವಿಸಿದ್ದರು. ಆದರೆ ನೆಹರೂ ಅವರು ಭಿನ್ನ ತತ್ತ್ವ ಹೊಂದಿದ್ದರು. ಕ್ರಮೇಣ ಹಳ್ಳಿಗಳ ಅಭಿವೃದ್ಧಿಗೆ ಸರಕಾರಗಳು ಕ್ರಮ ಕೈಗೊಳ್ಳುತ್ತ ಬಂದಿದ್ದರೂ 2047ರ ವೇಳೆಗೆ ಭಾರತವು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ದೇಶ) ಎನಿಸಿಕೊಳ್ಳಬೇಕಾದರೆ ವಿಭಿನ್ನ ವಿಧಾನ ಅಗತ್ಯವಾಗಿದೆ. ದೇಶದ ಮೈಕ್ರೋ ಎಕನಾಮಿಕ್ ತತ್ತ್ವದಲ್ಲಿ ಬದಲಾವಣೆ ತರುವ ಮೂಲಕ, ಹೂಡಿಕೆ, ಆವಿಷ್ಕಾರ, ತಂತ್ರಜ್ಞಾನ ಇತ್ಯಾದಿ ಅಂಶಗಳಿಂದ ಕೂಡಿದ ಮಿಶ್ರ ತತ್ತ್ವದ ಮೂಲಕ ಎಂಎಸ್ಎಂಇಗಳನ್ನು ಪ್ರೋತ್ಸಾಹಿಸಿದಲ್ಲಿ ಅಭಿವೃದ್ಧಿ ಕಾಣಬಹುದು ಎಂದರು. ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿದರು. ಆರ್ಥಿಕತೆ ಬೆಳೆದು ಸುಸ್ಥಿರವಾಗಬೇಕು. ಈ ನಿಟ್ಟಿನಲ್ಲಿ, ಉದ್ಯಮಶೀಲತೆಗೆ ಇರುವ ನೀತಿ ನಿರೂಪಣೆಗಳು ಅಭಿವೃದ್ಧಿ ಹೊಂದಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದಿಂದ ನಡೆದ ವಿಚಾರ ಸಂಕಿರಣವು ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಇದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಈ ವಿಚಾರ ಸಂಕಿರಣವು ಗ್ರಾಮೀಣದ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದರು.
ವಿಚಾರ ಸಂಕಿರಣದ ಮುಖ್ಯ ಸಲಹೆಗಾರ, ರಾಜ್ಯ ಯೋಜನಾ ಮಂಡಳಿ ಸದಸ್ಯ, ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ, ಡಾ.ಜಿ.ವಿ. ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಿ.ವಿ. ಜೋಷಿ ಹಾಗೂ ಪ್ರೊ. ಕೃಷ್ಣರಾಜ ಅವರನ್ನು ಸನ್ಮಾನಿಸಲಾಯಿತು.ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಫೀರ ನಿರೂಪಿಸಿದರು.