ಗ್ರಾಮೀಣ ಕ್ರೀಡೆಗಳು ಭಾರತೀಯ ಸಂಸ್ಕೃತಿ, ಪರಂಪರೆಯ ಜೀವನಾಡಿ: ಸ್ವಾಮೀಜಿ

KannadaprabhaNewsNetwork |  
Published : Oct 26, 2026, 02:00 AM IST
24ಕೆಎಂಎನ್ ಡಿ26 | Kannada Prabha

ಸಾರಾಂಶ

ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮರಕೋತಿ ಆಟ, ಚೌಕಾಬಾರ, ಗಿಲ್ಲಿ- ದಾಂಡು, ಬುಗುರಿ, ಕುಂಟೆಬಿಲ್ಲೆ, ಅಳ್ಳಿಗುಳ್ಳಿ, ಮಲ್ಲಕಂಬ, ಕೆಸರುಗದ್ದೆ ಓಟ ಮತ್ತು ಕಲ್ಲಾಟ ಸೇರಿದಂತೆ ಹಲವು ಸಾಂಪ್ರದಾಯಿಕ ಆಟಗಳು ಜನಪ್ರಿಯವಾಗಿದ್ದವು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಹಣ ವ್ಯಯಿಸುವ ಅಗತ್ಯವಿಲ್ಲ. ಸ್ಥಳೀಯವಾಗಿ ಸಿಗುವ ವಸ್ತುಗಳಿಂದಲೇ ಈ ಆಟಗಳನ್ನು ಆಡಬಹುದು.

ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮೀಣ ಕ್ರೀಡೆಗಳು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಜೀವನಾಡಿಯಾಗಿವೆ. ಇವು ಕೇವಲ ಮನರಂಜನೆಯ ಸಾಧನಗಳಲ್ಲ. ಬದಲಿಗೆ ನಮ್ಮ ಹಿರಿಯರಿಂದ ಬಂದ ಅಮೂಲ್ಯ ಕೊಡುಗೆಗಳಾಗಿವೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.

ನಗರದ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ, ಮನುಜ ಮತ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಮದ್ದೂರು ಘಟಕ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಲಗೋರಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕತೆ ಭರಾಟೆಯಲ್ಲಿ ಇಂದಿನ ಯುವ ಜನತೆ ಮೊಬೈಲ್ ಮತ್ತು ವಿಡಿಯೋ ಗೇಮ್ ಗಳತ್ತ ವಾಲುತ್ತಿರುವುದರಿಂದ ಅಪ್ಪಟ ಗ್ರಾಮೀಣ ಕ್ರೀಡೆಗಳು ನಶಿಸುವ ಹಂತ ತಲುಪುತ್ತಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮರಕೋತಿ ಆಟ, ಚೌಕಾಬಾರ, ಗಿಲ್ಲಿ- ದಾಂಡು, ಬುಗುರಿ, ಕುಂಟೆಬಿಲ್ಲೆ, ಅಳ್ಳಿಗುಳ್ಳಿ, ಮಲ್ಲಕಂಬ, ಕೆಸರುಗದ್ದೆ ಓಟ ಮತ್ತು ಕಲ್ಲಾಟ ಸೇರಿದಂತೆ ಹಲವು ಸಾಂಪ್ರದಾಯಿಕ ಆಟಗಳು ಜನಪ್ರಿಯವಾಗಿದ್ದವು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಹಣ ವ್ಯಯಿಸುವ ಅಗತ್ಯವಿಲ್ಲ. ಸ್ಥಳೀಯವಾಗಿ ಸಿಗುವ ವಸ್ತುಗಳಿಂದಲೇ ಈ ಆಟಗಳನ್ನು ಆಡಬಹುದು ಎಂದರು.

ಗ್ರಾಮೀಣ ಕ್ರೀಡೆಗಳನ್ನು ಆಡುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗುವ ಜತೆಗೆ ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸ ನೀಡುತ್ತದೆ. ಜಾತಿ ಮತಗಳ ಭೇಧವಿಲ್ಲದೆ ಗ್ರಾಮದ ಎಲ್ಲರೂ ಒಟ್ಟಾಗಿ ಸೇರಿ ಆಡುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ತಂಡದ ಮನೋಭಾವ ವೃದ್ಧಿಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಹಾಗೂ ಯುವಜನರು ಮೊಬೈಲ್, ಕಂಪ್ಯೂಟರ್ ಗಳಿಗೆ ಮಾರು ಹೋಗದೆ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ, ಮನುಜ ಮತ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಮುಂದಾಗಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂದ್ಯಾವಳಿಯಲ್ಲಿ 35 ವರ್ಷ ಮೇಲ್ಪಟ್ಟವರ ವಿಭಾಗದ ಎಂಟು ತಂಡಗಳು ಹಾಗೂ ಪ್ರೌಢಶಾಲಾ ವಿಭಾಗದ ಎಂಟು ತಂಡಗಳು ಸೇರಿದಂತೆ ಒಟ್ಟು 16 ತಂಡಗಳಿಂದ ಸುಮಾರು 150 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಎನ್.ಪ್ರಸನ್ನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ, ತಾಪಂ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಪಿ. ಸ್ವಾಮಿ, ಸುಮುಖ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂಜಯ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಕಂಠ, ನಂದೀಶ್, ಮೋಹನ್, ಸುಧೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ ಗೆದ್ದವರು

35 ವರ್ಷ ಮೇಲ್ಪಟ್ಟ ವಿಭಾಗ ಲಗೋರಿ ವಿಜೇತರು: ಪ್ರಥಮ - ನಗರಕೆರೆ, ದ್ವಿತೀಯ - ಶಿವಪುರ, ತೃತೀಯ - ಅಣೂರು

ಪ್ರೌಢಶಾಲಾ ವಿಭಾಗ: ಪ್ರಥಮ - ಭೈರವೇಶ್ವರ ಪ್ರೌಢಶಾಲೆ ಕದಲೂರು

ದ್ವಿತೀಯ - ಜವಾರ್ ಪ್ರೌಢಶಾಲೆ, ಮದ್ದೂರು, ತೃತೀಯ - ಪೂರ್ಣಪ್ರಜ್ಞ ಪ್ರೌಢಶಾಲೆ ಶಿವಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊನ್ನಾವರದಲ್ಲಿ ಅನಧಿಕೃತ ಬೋಟಿಂಗ್‌ ವ್ಯವಸ್ಥೆಗೆ ಆಕ್ರೋಶ
ಉಳಿಕೆಯ ಹಣ ಒಂದೇ ಕಡೆ ಹೂಡಿಕೆ ಸರಿಯಲ್ಲ: ಸಹನಾ ಬಾಳ್ಕಲ್