ಕನ್ನಡಪ್ರಭ ವಾರ್ತೆ ಸುರಪುರ
ಸುರಪುರ ಕ್ಷೇತ್ರದ ಸ್ಥಳೀಯ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ನರ್ಸಿಂಗ್ ಶಿಕ್ಷಣ ದೊರೆಯುವಂತೆ, ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ವೈದ್ಯಕೀಯ ಶಿಕ್ಷಣ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ ಅವರ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವರು, ಸುರಪುರದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಇಲ್ಲದಿರುವುದು ಸರ್ಕಾರದ ಗಮನದಲ್ಲಿದೆ. ತಾಲೂಕು ಆಸ್ಪತ್ರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವ್ಯಾಪ್ತಿಗೆ ಬರುತ್ತಿದ್ದು, ಇಲಾಖೆಯಿಂದ ಪ್ರಸ್ತಾವನೆ ಸ್ವೀಕೃತವಾದಲ್ಲಿ ನಿಯಮಾನುಸಾರ ಹಾಗೂ ಆರ್ಥಿಕ ಲಭ್ಯತೆ ಆಧರಿಸಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.ಕಕ್ಕೇರಾ ಪಟ್ಟಣದ ಉಪ ಪೊಲೀಸ್ ಠಾಣೆಯನ್ನು ಸಾರ್ವಜನಿಕರ ಸುರಕ್ಷೆತೆಗೆ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದ ಠಾಣೆ ಯಾಗಿ ಮೇಲ್ದರ್ಜೆಗೆ ಏರಿಸುವುದರ ಕುರಿತು ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಪ್ರಶ್ನೆ ಕೇಳಿದರು.
ಪ್ರಸ್ತುತ ಕಕ್ಕೇರಾ ಹೊರ ಠಾಣೆಗೆ ಮಂಜೂರಾಗಿರುವ ಒಂದು ಎಎಸ್‌ಐ, ಎರಡು ಸಿಹೆಚ್‌ಸಿ, ನಾಲ್ಕು ಸಿಪಿಸಿ ಹುದ್ದೆಗಳನ್ನು ಮಾತೃ ಠಾಣೆಯಾದ ಕೋಡೆಕಲ್ ಠಾಣೆಯಲ್ಲಿಯೇ ಮುಂದುವರೆಸಲು ಹಾಗೂ ಪ್ರಸ್ತಾಪಿತ ಕಕ್ಕೇರಾ ಪೊಲೀಸ್ ಠಾಣೆಗೆ ಒಂದು ಪಿಎಸ್‌ಐ, ನಾಲ್ಕು ಎಎಸ್‌ಐ, ಒಂಬತ್ತು ಸಿಹೆಚ್‌ಸಿ, ೧೮ ಸಿಪಿಸಿ ಹಾಗೂ ಒಬ್ಬ ಎಪಿಸಿ ಚಾಲಕ ಸೇರಿದಂತೆ ಒಟ್ಟು ೩೩ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದರು.