ದೊಡ್ಡಬಳ್ಳಾಪುರ: ಬಹುಭಾಷಾ ಗಾಯಕಿ ದಿವಂಗತ ಎಸ್.ಜಾನಕಿ ಸ್ವರನಮನ ಕಾರ್ಯಕ್ರಮ ಇಲ್ಲಿನ ಕನ್ನಡ ಜಾಗೃತ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುಸ್ವರ ಟ್ರಸ್ಟ್ ಸಹಯೋಗದಲ್ಲಿ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಗಣ್ಯರು, ಎಸ್.ಜಾನಕಿ ಅವರು ಭಾರತೀಯ ಚಿತ್ರರಂಗದ ಹೆಮ್ಮೆಯ ಗಾಯಕಿ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 17 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಬಹುಭಾಷಾ ಗಾಯಕಿಯಾಗಿ ದಾಖಲೆ ಬರೆದಿದ್ದಾರೆ ಎಂದರು.
ಚಿತ್ರಗೀತೆಗಳ ಜೊತೆಗೆ ಅವರು ಹಾಡಿರುವ ಭಕ್ತಿಗೀತೆ, ಭಾವಗೀತೆ ಮತ್ತು ಜಾನಪದ ಗೀತೆಗಳು ಕೇಳುಗರ ಮನಗೆದ್ದಿವೆ. ಪ್ರೀತಿ, ವಿರಹ, ಸಂತೋಷ, ದುಃಖ, ಕೋಪ ಹೀಗೆ ಎಲ್ಲಾ ಭಾವನೆಗಳನ್ನೂ ತಮ್ಮ ಧ್ವನಿಯಲ್ಲೇ ಅತ್ಯಂತ ಸುಂದರವಾಗಿ ಜೀವಂತಗೊಳಿಸುತ್ತಿದ್ದರು. ಜಾನಕಿಯವರ ಧ್ವನಿಯ ಬಹುದೊಡ್ಡ ವೈಶಿಷ್ಟ್ಯವೆಂದರೆ ಅವರು ಚಿಕ್ಕ ಮಕ್ಕಳ ಧ್ವನಿಯನ್ನು ಅನುಕರಿಸಿ ಹಾಡುತ್ತಿದ್ದ ರೀತಿ. ಅನೇಕ ಚಿತ್ರಗಳಲ್ಲಿ ಅವರು ಹಾಡಿದ ತುಂಟಾಟದ ಮತ್ತು ಮಕ್ಕಳ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ ಎಂದರು.ಕನ್ನಡಪರ ಹಿರಿಯ ಹೋರಾಟಗಾರರಾದ ತ.ನ.ಪ್ರಭುದೇವ್, ಸಂಜೀವ್ ನಾಯಕ್, ಕನ್ನಡ ಜಾಗೃತ ಪರಿಷತ್ತಿನ ಟ್ರಸ್ಟಿಗಳಾದ ಡಾ.ಎ.ಓ.ಆವಲಮೂರ್ತಿ, ಎಸ್.ಮಹಾಬಲೇಶ್ವರ್, ಬಿ.ಜಿ.ಅಮರನಾಥ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡ ಪಕ್ಷ ಅಧ್ಯಕ್ಷ ವೆಂಕಟೇಶ್, ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜ್ ಸೇರಿದಂತೆ ಸಂಘಟನೆಗಳ ಮುಖಂಡರು, ಎಸ್.ಜಾನಕಿ ಅಭಿಮಾನಿಗಳು ಭಾಗವಹಿಸಿದ್ದರು.
ಎಸ್.ಜಾನಕಿ ನುಡಿ ನಮನ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕಲಾವಿದರುಗಳು ನಡೆಸಿಕೊಟ್ಟ ಎಸ್.ಜಾನಕಿ ಹಾಡಿರುವ ಮಧುರ ಚಲನಚಿತ್ರಗಳ ಗಾಯನ ಪ್ರೇಕ್ಷಕರ ಗಮನಸೆಳೆಯಿತು.
16ಕೆಡಿಬಿಪಿ2-