ಹೈಕಮಾಂಡ್‌ ಸಿಲುಕಿಸಲು ಎಸ್ಸೆಸ್ಸೆಂ ರಾಜೀನಾಮೆ ನಾಟಕ

KannadaprabhaNewsNetwork |  
Published : Feb 11, 2026, 01:30 AM IST
10ಕೆಡಿವಿಜಿ5-ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಅಹಿಂದ ವರ್ಗ ಟಿಕೆಟ್ ಕೇಳಿಕೊಂಡು, ಸರಣಿ ಸಭೆಗಳ ಮೂಲಕ ಒತ್ತಡ ಹೇರುತ್ತಿದೆ. ಇದರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಇಕ್ಕಟ್ಟಿಗೆ ಸಿಲುಕಿಸಲು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ರಾಜೀನಾಮೆ ಮಾತುಗಳು ತೇಲಿ ಬರುತ್ತಿವೆಯಷ್ಟೇ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್‌ ಟೀಕಿಸಿದ್ದಾರೆ.

- ಬಿಜೆಪಿ ಮುಖಂಡ ಯಶವಂತ ರಾವ್ ಟೀಕೆ । ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್‌ ಟಿಕೆಟ್ ಕೊಡಲು ಸವಾಲು

- ಉಪ ಚುನಾವಣೆಗೆ ಬಿಜೆಪಿಯಲ್ಲಿ ಐವರು ಆಕಾಂಕ್ಷಿಗಳಿದ್ದೇವೆ, ಯಾರಿಗೇ ಪಕ್ಷ ಟಿಕೆಟ್ ಕೊಟ್ಟರೂ ಗೆಲುವೇ ನಮ್ಮ ಗುರಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಅಹಿಂದ ವರ್ಗ ಟಿಕೆಟ್ ಕೇಳಿಕೊಂಡು, ಸರಣಿ ಸಭೆಗಳ ಮೂಲಕ ಒತ್ತಡ ಹೇರುತ್ತಿದೆ. ಇದರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಇಕ್ಕಟ್ಟಿಗೆ ಸಿಲುಕಿಸಲು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ರಾಜೀನಾಮೆ ಮಾತುಗಳು ತೇಲಿ ಬರುತ್ತಿವೆಯಷ್ಟೇ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್‌ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ನೀಡುವಂತೆ ಅಹಿಂದ ವರ್ಗಗಳು ಬಿಗಿಪಟ್ಟು ಹಿಡಿದಿವೆ. ಇದರಿಂದ ತಮ್ಮ ಹೈಕಮಾಂಡ್ ಮೇಲೆ ಒತ್ತಡ ಹೇರಲು ಈಗ ರಾಜೀನಾಮೆಯ ನಾಟಕ ಶುರುವಾಗಿದೆ ಎಂದರು.

ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಗಲಾಟೆಯಾಗುತ್ತದೆ, ನಿಮ್ಮನ್ನು ಊರು ಬಿಡಿಸುತ್ತಾರೆಂದು ಅಲ್ಪಸಂಖ್ಯಾತರ ಮುಸ್ಲಿಮರಲ್ಲಿ ಭಯ ಹುಟ್ಟಿಸಿಕೊಂಡೇ ಶಾಮನೂರು ಕುಟುಂಬ ಇದುವರೆಗೆ ಶಾಸಕ, ಸಂಸದ, ಸಚಿವರಾಗಿ ಅಧಿಕಾರ ನಡೆಸಿಕೊಂಡು ಬಂದಿದೆ. ಈಗ ಕೊಟ್ಟ ಮಾತಿನಂತೆ ಮುಸ್ಲಿಮರೂ ಸೇರಿದಂತೆ ಅಹಿಂದ ವರ್ಗದ ಯಾರಿಗಾದರೂ ಟಿಕೆಟ್ ಕೊಡುವಂತೆ ಆ ವರ್ಗಗಳು ಹಠಕ್ಕೆ ಬಿದ್ದು ಸರಣಿ ಮಾಡುತ್ತಿವೆ ಎಂದರು.

ಶಾಮನೂರು ಕುಟುಂಬ ಹೊರತುಪಡಿಸಿದರೆ, ಬೇರೆ ಯಾರೂ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲಲಾಗುವುದಿಲ್ಲ ಎಂಬ ಸುಳ್ಳು ಹರಡುವ ಕೆಲಸ ನಿರಂತರ ನಡೆದಿದೆ. ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಮಗನ ವಿರುದ್ಧವೇ ಮುಸ್ಲಿಂ ಅಭ್ಯರ್ಥಿ ಗೆದ್ದಿಲ್ಲವೇ? ಯಾರನ್ನು ಗೆಲ್ಲಿಸಬೇಕೆಂಬುದು ಮತದಾರರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಯಶವಂತ ರಾವ್‌ ಹೇಳಿದರು.

ದಿವಂಗತ ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಸಹ ಚುನಾವಣೆಗಳಲ್ಲಿ ಸೋತಿದ್ದಾರೆ. ಶಾಮನೂರು ಕುಟುಂಬ ಮಾತ್ರವೇ ಜಾತ್ಯತೀತವೇ? ಮುಸ್ಲಿಮರಲ್ಲಿ ಬೇರೆ ಯಾರೂ ಜಾತ್ಯತೀತರೇ ಇಲ್ಲವೇ? ಮುಸ್ಲಿಂ ಅಭ್ಯರ್ಥಿಗಳಿಗೆ ಹಿಂದೂಗಳು ಮತ ಹಾಕುವುದಿಲ್ಲವೇ? ಬರಲಿರುವ ದಕ್ಷಿಣ ಉಪ ಚುನಾವಣೆಯಲ್ಲಾದರೂ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡಿ, ಅಲ್ಪಸಂಖ್ಯಾತರ ಋಣ ತೀರಿಸುವ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು.

ಕ್ಷೇತ್ರ ಪುನರ್ವಿಂಗಡಣೆಗೆ ಮುನ್ನ ದಾವಣಗೆರೆ ಕ್ಷೇತ್ರ, ನಂತರ ಕ್ಷೇತ್ರ ಪುನರ್ವಿಂಗಡಣೆ ನಂತರ 3 ಸಲ ಹೀಗೆ ಒಟ್ಟು 4 ಸಲ ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡಿದ್ದೇನೆ. ಒಂದು ಸಲ ಎಸ್‌.ಎಸ್‌. ಮಲ್ಲಿಕಾರ್ಜುನ ವಿರುದ್ಧ, 3 ಸಲ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ವಿರುದ್ಧ 2 ಸಾವಿರ ಮತಗಳಿಂದ 16 ಸಾವಿರ ಮತಗಳ ಅಂತರದಲ್ಲಿ ಸೋತಿದ್ದೇನೆ. ನಾಲ್ಕೂ ಸಲವೂ ಮುಸ್ಲಿಂ ಮತಗಳಿಂದಲೇ ಶಾಮನೂರು ಕುಟುಂಬ ಗೆದ್ದಿರುವುದು ಸ್ಪಷ್ಟ. ಹಾಗೆಂದು ನನಗೆ ಮತ ಹಾಕಿಲ್ಲವೆಂದು ಮುಸ್ಲಿಮರ ಬಗ್ಗೆ ನಾನೆಂದಿಗೂ ಹಗುರವಾಗಿ ಮಾತನಾಡಿಲ್ಲ ಎಂದು ಯಶವಂತ ರಾವ್‌ ಸ್ಪಷ್ಟಪಡಿಸಿದರು.

ಉಪ ಚುನಾವಣೆಗೆ ಐವರು ಸಾಮಾನ್ಯ ಕಾರ್ಯಕರ್ತರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದೇವೆ. ನಾವ್ಯಾರೂ ವಿಮಾನ, ಹೆಲಿಕಾಪ್ಟರ್, ಬಿಎಂಡಬ್ಲ್ಯು ಕಾರಿನಲ್ಲಿ ಓಡಾಡಿದವರಲ್ಲ. ನಾವು ಐವರಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಒಟ್ಟಾಗಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ. ಎನ್‌ಡಿಎ ತೀರ್ಮಾನಕ್ಕೂ ಬದ್ಧ ಎಂದರು.

ಪಕ್ಷದ ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ, ಎಂ.ಹಾಲೇಶ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ಕಿಶೋರಕುಮಾರ, ಬಾಲಚಂದ್ರ ಶ್ರೇಷ್ಟಿ ಇತರರು ಇದ್ದರು.

- - -

(ಕೋಟ್‌) ಕಾಂಗ್ರೆಸ್ಸಿನಲ್ಲಿ ಒಳ್ಳೆಯವರು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬರುವಂತಹ ಕೆಲಸ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಮಾಡಲಿ. ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಗೆಲುವು ಮಾತ್ರ ಶತಃಸಿದ್ಧ. ಈ ಬಗ್ಗೆ ಯಾವುದೇ ಅನುಮಾನವೂ ಬೇಡ.

- ಎಂ.ಹಾಲೇಶ, ಪಾಲಿಕೆ ಮಾಜಿ ಸದಸ್ಯ

- - -

-10ಕೆಡಿವಿಜಿ5.ಜೆಪಿಜಿ: ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಸ್ತಾನ ಉಳಿದರೆ ಮಾತ್ರ ಸಂಸ್ಕೃತಿ ರಕ್ಷಣೆ
5,06,582 ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ