ಕನ್ನಡಪ್ರಭ ವಾರ್ತೆ ಸಾಗರ
ಜನರು ಮುಖ್ಯವಾದ ವಿಷಯಗಳ ಬಗ್ಗೆ ಆಸಕ್ತಿ ತೋರದೆ ಪ್ರಮುಖವಲ್ಲದ ಸುದ್ದಿಗಳ ಬಗ್ಗೆಯೇ ಹಾತೊರೆಯುತ್ತಿರುವುದರಿಂದ ಇವತ್ತಿನ ಮಾಧ್ಯಮ ರೋಚಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಖೇದದ ಸಂಗತಿ ಪತ್ರಿಕಾ ಅಂಕಣಕಾರ ಪೂರ್ಣಪ್ರಜ್ಞ ಬೇಳೂರು ಹೇಳಿದರು.ಇಲ್ಲಿನ ವಂಶವಾಹಿನಿ ಟ್ರಸ್ಟ್, ಪತ್ರಿಕಾ ಸ್ನೇಹಿತರ ಬಳಗ ಹಾಗೂ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ಎಸ್ಎಸ್ ವಿಭಾಗ ಸಂಯುಕ್ತವಾಗಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಹಿಂದೆ-ಮುಂದೆ ಎನ್ನುವ ವಿಷಯದ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಲಂಬಿಸಬೇಕಾದ ಶಾಸಕಾಂಗ, ಕಾರ್ಯಾಂಗ , ನ್ಯಾಯಾಂಗ ಹಾಗೂ ಪ್ರತಿಕಾರಂಗ ಈ ಯಾವ ಅಂಗವನ್ನು ಇಂದು ಜನರು ಅವಲಂಬಿಸುತ್ತಿಲ್ಲ. ಅದರಲ್ಲಿಯೂ ಪತ್ರಿಕಾರಂಗದಿಂದ ಆಧುನಿಕ ಜಗತ್ತು ದೂರದೂರ ಸಾಗುತ್ತಿರುವುದು ಮುಂದಿನ ಎಲ್ಲ ವಿಪ್ಲವಗಳಿಗೂ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ಯುವ ಸಮೂಹಕ್ಕೆ ಸಾಮಾನ್ಯ ಜ್ಞಾನದ ಯಾವ ಓದು ಬೇಡವಾಗಿದೆ. ಅದರಲ್ಲಿಯೂ ಪತ್ರಿಕೆಯ ಓದಿನಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಎಲ್ಲವನ್ನೂ ಒದಗಿಸಬಹು ದಾದ ಮತ್ತು ಸದಾ ಕೈಯಲ್ಲಿಯೇ ಇರುವ ಮೊಬೈಲ್‌ನಲ್ಲಿಯೇ ಸಿಗಬಹುದಾದ ಪತ್ರಿಕೆಯನ್ನು ನೋಡುವ ತಾಳ್ಮೆ ಕೂಡ ಇಲ್ಲದಿರುವುದು ವಿಪರ್ಯಾಸ ಎಂದರು.ಹಿಂದೆ ಪತ್ರಿಕೆಗಳಿಗೆ ಜನರನ್ನು ನಾಗರಿಕರನ್ನಾಗಿಸುವ ಜವಾಬ್ದಾರಿ ಇತ್ತು. ಆದರೆ ಇಂದು ಪತ್ರಿಕೆಯ ಕುರಿತೇ ಆಸಕ್ತಿ ಇಲ್ಲದವರನ್ನು ನಾಗರಿಕರನ್ನಾಗಿಸುವ ವಿಧಾನವಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಒಂದು ಪತ್ರಿಕೆಯಲ್ಲಿ ನೋಡುವ, ಆಡುವ, ಜಗಿಯುವ ಹಾಗೂ ಜೀರ್ಣಿಸಿಕೊಳ್ಳುವ ನಾಲ್ಕು ವಿಧದ ಸುದ್ದಿಗಳು ಇರುತ್ತವೆ. ಆದರೆ ಯಾವುದನ್ನು ಗಮನಿಸುವ ಮನಸ್ಸು ಇಲ್ಲದವರಿಗೆ ಇದನ್ನು ಮುಟ್ಟಿಸುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ ಮಾತನಾಡಿ, ಅಕ್ಷರ ಆಸಕ್ತಿವುಳ್ಳ ಯಾವುದೇ ಸಂಸ್ಥೆ ಪತ್ರಿಕಾ ದಿನಚರಣೆ ಖಂಡಿತಾ ಮಾಡಬಹುದು. ಅಂತಯೇ ವಂಶವಾಹಿನಿ ಅಕ್ಷರಲೋಕದಲ್ಲಿ ಸಾಧನೆ ಮಾಡಿರುವವರನ್ನು ಈ ದಿನ ಗುರುತಿಸುವ ಕೆಲಸ ಮಾಡುತ್ತಿದೆ ಎಂದರು.ನಗರಸಭೆ ಸದಸ್ಯೆ ಸವಿತಾ ವಾಸು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಎಚ್.ರಾಜೇಶ್ವರಿ, ಐಕ್ಯೂಎಸಿ ಸಂಚಾಲಕ ಡಾ.ಶಿವಾನಂದ ಎಸ್.ಭಟ್ ಹಾಜರಿದ್ದರು. ಸಪ್ತಕ ಪ್ರಾರ್ಥಿಸಿದರು. ರಾಜೇಶ್ ಭಡ್ತಿ ಸ್ವಾಗತಿಸಿದರು. ಶ್ರೀಪಾದ ಕವಲಕೋಡು ವಂದಿಸಿದರು. ಶಾಲಿನಿ, ಸುಷ್ಮಾ ನಿರೂಪಿಸಿದರು.