ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಜರತ್ ಸೈಯದ್ ಖಾದರ್ ಶಾ ವಲಿ ದರ್ಗಾ ಆವರಣದಲ್ಲಿ ಈದ್ ಮಿಲಾದ್ ಅಂಗವಾಗಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಅಧ್ಯಕ್ಷರಾದ ಮಹಬೂಬ್ ಪಾಷಾ ಅವರ ಸಮ್ಮುಖದಲ್ಲಿ ತರಕಾರಿ ಸಗಟು ಮಾರಾಟಗಾರರ ವತಿಯಿಂದ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಸುನ್ನಿ ಮುಸ್ಲಿಂ ಜಮಾಯತ್ ಕಮಿಟಿಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಈದ್ ಮಿಲಾದ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹಾಸನ ರಸ್ತೆ, ಬಿ ಎಚ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ವಿವಿಧ ಘೋಷಣೆಗಳು ಹಾಗೂ ಧಾರ್ಮಿಕ ಸಂದೇಶಗಳೊಂದಿಗೆ ನಡೆದ ಮೆರವಣಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿತು.ಮೆರವಣಿಗೆಯಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಭಾಗಿ:
ಕ್ಷೇತ್ರದ ಶಾಸಕ ಹಾಗೂ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ಅವರು ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡು ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾದಿ ಮೊಹಮ್ಮದ್ ಅವರ ಜೀವನ ಹಾಗೂ ಬೋಧನೆಗಳು ಶಾಂತಿ, ಸಹೋದರತ್ವ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡುತ್ತವೆ. ಎಲ್ಲ ಧರ್ಮಗಳ ಜನರು ಪರಸ್ಪರ ಗೌರವ ಹಾಗೂ ಸೌಹಾರ್ದತೆಯಿಂದ ಬದುಕಿದಾಗ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು. ಈದ್ ಮಿಲಾದ್ ಆಚರಣೆಯ ಮೂಲಕ ಪ್ರವಾದಿ ಮೊಹಮ್ಮದ್ ಅವರ ಜೀವನಾದರ್ಶಗಳನ್ನು ಸ್ಮರಿಸುವುದರ ಜತೆಗೆ ದಯೆ, ಸಹನೆ, ಸಮಾನತೆ, ಮಾನವೀಯತೆ ಹಾಗೂ ಪರಸ್ಪರ ಗೌರವದ ಸಂದೇಶವನ್ನು ಸಾರಲಾಯಿತು. ವಿವಿಧ ವಯೋಮಾನದವರು ಮೆರವಣಿಗೆಯಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್, ಡಿವೈಎಸ್ಪಿ ಗೋಪಿ, ನಗರಸಭೆ ಮಾಜಿ ಅಧ್ಯಕ್ಷ ಎಂ. ಸಮಿಉಲ್ಲಾ, ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಮಾಜಿ ಅಧ್ಯಕ್ಷ ಸೈಯದ್ ಸಿಕಂದರ್, ಸುನ್ನಿ ಮುಸ್ಲಿಂ ಜಮಾಯತ್ ಕಮಿಟಿ ಉಪಾಧ್ಯಕ್ಷ ಸೈಯದ್ ದಸ್ತಗಿರ್, ಕಾರ್ಯದರ್ಶಿ ಅಬ್ದುಲ್ ಜಮೀಲ್, ಕಲಂದರ್ ಷರೀಫ್, ಖಜಾಂಚಿ ಸೈಯದ್, ನಗರಸಭೆ ಮಾಜಿ ಸದಸ್ಯ ದರ್ಶನ್, ಅಸ್ಲಾಂ ಪಾಷಾ, ರಿಜ್ವಾನ್ ಸೇರಿದಂತೆ ಜಮಾಯತ್ ಕಮಿಟಿಯ ಸದಸ್ಯರು, ವಿವಿಧ ಗಣ್ಯರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.