ಗಣೇಶ್ ಕಾಮತ್
ಉದ್ಯಮಿಗಳು, ರಾಜಕಾರಣಿಗಳು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿರುವುದು ಮತ್ತು ಸರ್ಕಾರವೂ ಬೇಕಾಬಿಟ್ಟಿ ಅನುಮತಿ ನೀಡುತ್ತಿರುವ ಕಾರಣದಿಂದಾಗಿ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ ಎಂದು ಸಾಹಿತಿ ಅಬ್ದುಲ್ ಹಮೀದ್ ಪಕ್ಕಲಡ್ಕ ಹೇಳಿದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಕಡಂದಲೆ ಪಾಲಡ್ಕ ಪೂಪಾಡಿಕಲ್ಲು ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು 947ಕ್ಕೂ ಅಧಿಕ ಕನ್ನಡ ಮಾಧ್ಯಮ ಶಾಲೆಗಳು ಮಕ್ಕಳ ಕೊರತೆಯಿಂದ ವಿಲೀನ ಹಾಗೂ ಮುಚ್ಚಲ್ಪಟ್ಟಿವೆ. ಕನ್ನಡ ಭಾಷೆಯ ಉಳಿವಿಗಾಗಿ ಕೇರಳ ಸರ್ಕಾರದ ಮಾದರಿಯಲ್ಲಿ ನಮ್ಮ ಸರ್ಕಾರವೂ ಕನ್ನಡ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆಗೆ ತುರ್ತುಕ್ರಮಕ್ಕೆ ಮುಂದಾಗಬೇಕಿದೆ ಎಂದರು.ಕನ್ನಡ ಸಾಹಿತ್ಯ ಕನ್ನಡಿಗರ ಆತ್ಮ : ಕನ್ನಡ ಸಾಹಿತ್ಯ ಬರೇ ಬರವಣಿಗೆಯಲ್ಲ ಅದು ಕನ್ನಡಿಗರ ಆತ್ಮ . ಹಳೆಯ ತತ್ವಗಳ ಜತೆ ಆಧುನಿಕ ವಿಚಾರಗಳೊಂದಿಗೆ ಬೆಳೆಯುತ್ತಿರುವ ಕನ್ನಡ ಸಾಹಿತ್ಯವು ಮುಂದಿನ ಪೀಳಿಗೆಗೆ ಭಾಷಾ ಪ್ರೇಮದ ದಾರಿದೀಪವಾಗಬೇಕು. ಭಾರತವೆಂಬ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಮಾಲೀಕರಾದ ನಾವೆಲ್ಲರೂ ಸಹೋದರತೆಮ ಭಾವೈಕ್ಯದಿಂದ ಬದುಕುವುದರೊಂದಿಗೆ ಕನ್ನಡವನ್ನು ಸಮೃದ್ಧಗೊಳಿಸೋಣ ಎಂದವರು ಕರೆ ನೀಡಿದರು.
ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಸಮಾಜಕ್ಕೆ ಹಿತವಾಗಿರುವುದು ಮಾತ್ರ ಸಾಹಿತ್ಯವಾಗಿದೆ. ಸಾಹಿತ್ಯ ಆಸ್ತಿಕತೆಯಿಂದ ಕೂಡಿದ್ದು ಎಲ್ಲರನ್ನೂ ಒಗ್ಗೂಡಿಸಬೇಕು. ಅಹಿಂಸಾಭಾವನೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು. ಪುಸ್ತಕ ಹಿಡಿದವರು ದೊಡ್ಡವರು ಎಂಬ ಕಾಲವಿತ್ತು. ಓದುವ ಸಂಸ್ಕೃತಿ ಮತ್ತೆ ಬೆಳೆಯಬೇಕು. ಜ್ಞಾನದ ವಿಸ್ತಾರದಿಂದ ಲೋಕ ಕಂಟಕ ಹೋಗುವಂತಾಗಬೇಕು. ಸಾಹಿತ್ಯ ಸಮ್ಮೇಳನಗಳಿಂದ ಸಮಾಜಕ್ಕೆ ಸಂದೇಶ ರವಾನೆಯಾಗಬೇಕು. ಎಲ್ಲಾದರೂ ಇರಿ ಎಂತಾದರೂ ಇರಿ ಆದರೆ ಭಾರತೀಯರಾಗಿರಿ ಎಂದರು. ದ.ಕ ಜಿಲ್ಲಾ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ.ಶ್ರೀನಾಥ್ ಆಶಯ ನುಡಿಗಳನ್ನಾಡಿ ಕನ್ನಡ ಸಾಹಿತ್ಯ ಸಮ್ಮೆಳನಗಳು ಸರ್ವಸ್ಪರ್ಶಿಯಾಗಬೇಕೆಂಬ ಆಶಯ ನಮ್ಮದಾಗಿದೆ. ಹಾಗಾಗಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎಳನೀರು ಪ್ರದೇಶದಲ್ಲೂ ಸಮ್ಮೇಳನ ನಡೆಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 15 ತಾಲೂಕು , 3 ಜಿಲ್ಲಾ 2, ಹೋಬಳಿ ಮಟ್ಟ ಹಾಗೂ ಒಂದು ಮಕ್ಕಳ ಸಮ್ಮೇಳನ ನಡೆಸಲಾಗಿದೆ. ಸುಮಾರು 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದ್ದು ಅವುಗಳಲ್ಲಿ ವಿದ್ಯಾರ್ಥಿ ಕೇಂದ್ರಿತ 300 ಕಾರ್ಯಕ್ರಮಗಳಾಗಿವೆ. ಇಂದಿನ ಸಮ್ಮೇಳನವೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು.ಕೃತಿ ಬಿಡುಗಡೆ: ಸಮಾರಂಭದಲ್ಲಿ ಮಾರೂರು ರಾಘವೇಂದ್ರ ಭಂಡಾರ್ಕರ್ ಅವರ ಕವನ ಸಂಕಲನ ಓ ಮನಸ್ಸೇ.., ಅಮೋಗಸಿದ್ದ ಪಾಟೀಲ್ ಅವರ ಕವನ ಸಂಕಲನ ಭಾವಾಮೋಘ ಮತ್ತು ಸಮ್ಮೇಳನಾಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ಕಥಾ ಸಂಕಲನ ಹಾದಿಯೇ ಇಲ್ಲದ ಹಾದಿಯನ್ನು ವೇದಿಕೆಯಲ್ಲಿದ್ದ ಗಣ್ಯರು ಸೇರಿ ಲೋಕಾರ್ಪಣೆಗೊಳಿಸಿದರು.
ವೇದಿಕೆಯಲ್ಲಿ ಚೌಟರ ಅರಮನೆಯ ಕುಲದೀಪ್ ಎಂ. ಕೆ. ಗುಣಪಾಲ ಕಡಂಬ, ಹಂಡೇಲುಗುತ್ತು ಧನಕೀರ್ತಿ ಬಲಿಪ, ಎಂಸಿಎಸ್ಎಂ ಸೊಸೈಟಿ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ನಿರ್ದೇಶಕ ಉದ್ಯಮಿ ಸಿ.ಹೆಚ್. ಅಬ್ದುಲ್ ಗಫೂರ್, ಎಸ್. ಡಿ. ಸಂಪತ್ ಸಾಮ್ರಾಜ್ಯ, ಬಿಲ್ಲವ ಸಂಘದ ಅಧ್ಯಕ್ಷ ಲೀಲಾಧರ ಪೂಜಾರಿ ಕಡಂದಲೆ, ತಾಲೂಕು ಕಸಾಪ ಘಟಕದ ಮಾರ್ಗದರ್ಶಕ ಡಾ. ಪುಂಡಿಕಾಯ್ ಗಣಪಯ್ಯ ಭಟ್, ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ್ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ಪಿ.ಸುಚರಿತ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಮಾಜದಲ್ಲಿ ಕೌಶಲ, ಸವಾಲಿನ ಬದುಕಿನ ಅವಕಾಶಗಳ ನಡುವೆ ನಾಡಿನ ಭಾವನೆ, ಕನ್ನಡ ಮನಸ್ಸುಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ., ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಲ್.ಜೆ. ಫೆರ್ನಾಂಡೀಸ್ ವಂದಿಸಿದರು.
ಕನ್ನಡ ಭುವನೇಶ್ವರಿ ಮೆರವಣಿಗೆಗೆ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ದಿನಕರ ಕುಂಭಾಶಿ ಚಾಲನೆ ನೀಡಿದರು. ಬಳಿಕ ಕೆ. ಆರ್. ಪಂಡಿತ್ ರಾಷ್ಟ್ರಧ್ವಜ, ಡಾ. ಎಂ.ಪಿ. ಶ್ರೀನಾಥ್ ಕಸಾಪ ಧ್ವಜ, ಮತ್ತು ಎಂ ಬಾಹುಬಲಿ ಪ್ರಸಾದ್ ಕನ್ನಡ ಧ್ವಜಾರೋಹಣ ನೆರವೇರಿಸಿದರು.