ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರಚಿಸಿರುವ ಸಾಹುಕಾರ್ ಚನ್ನಯ್ಯ ಮತ್ತು ವಿವೇಕಾನಂದ ಬಡಾವಣೆಗಳು ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ರಚಿಸಿರುವ ಹಾಲಹಳ್ಳಿ ಸ್ಲಂ ಬಡಾವಣೆ ಇನ್ನೂ ಮಂಡ್ಯ ನಗರಸಭೆಗೆ ಹಸ್ತಾಂತರವಾಗಿಲ್ಲ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ನಗರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಮುಡಾ ಮತ್ತು ಇನ್ನಿತರೆ ಇಲಾಖೆ, ಮಂಡಳಿ, ಸಂಸ್ಥೆಗಳಿಂದ ರಚಿಸಲ್ಪಟ್ಟಿರುವ ಬಡಾವಣೆಗಳನ್ನು ನಗರಸಭೆಗೆ ಹಸ್ತಾಂತರಿಸುವ ಪೂರ್ವದಲ್ಲಿ ಸದರಿ ಬಡಾವಣೆಗಳಲ್ಲಿ ಸಂಪೂರ್ಣ ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ, ಉದ್ಯಾನ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಿ (ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗದಂತಹ) ನಿಯಮಾನುಸಾರ ಹಸ್ತಾಂತರಿಸಲು ಕ್ರಮವಹಿಸಿದ್ದಲ್ಲಿ ಹಸ್ತಾಂತರಿಸಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಶಾಸಕ ಮಧು ಜಿ.ಮಾದೇಗೌಡರು ಅವರು ಮಂಡ್ಯ ನಗರಸಭೆ ವ್ಯಾಪ್ತಿಗೆ ಸೇರಿದ ಹಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವ ಬಗ್ಗೆ ಗಮನ ಸೆಳೆದಿರುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಮಂಡ್ಯ ನಗರದಲ್ಲಿನ ಹಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆಯ ಕೊಳವೆಗಳನ್ನು ಅಳವಡಿಸಲು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4ರ ಯೋಜನೆಯಡಿಯಲ್ಲಿ 5.41 ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಟೆಂಡರ್ ಕರೆಯಬೇಕಿರುತ್ತದೆ ಎಂದು ಉತ್ತರಿಸಿದ್ದಾರೆ.
ಮಂಡ್ಯ ನಗರದ ಉದಯಗಿರಿ ಅಡ್ಡ ರಸ್ತೆಗಳು, ಸೋಮೇಶ್ವರ ಸಮುದಾಯ ಭವನ ಹತ್ತಿರ ಬಿ.ಎಂ.ರಸ್ತೆ, ಹೊನ್ನಯ್ಯ ಬಡಾವಣೆ, ಹಾಲಹಳ್ಳಿ ಸ್ಲಂ ನಿಂದ ಚೀರನಹಳ್ಳಿ ರಸ್ತೆ, ಯತ್ತಗದಹಳ್ಳಿ ರಸ್ತೆ ಮತ್ತು ಇಂದಿರಾ ಕಾಲೋನಿ ವೀರಗಲ್ಲಪ್ಪಸ್ವಾಮಿ ದೇವಸ್ಥಾನದ ಹತ್ತಿರ, ನಾಗಮಂಗಲ ರಸ್ತೆ, ಸಕ್ಕರೆ ಕಾರ್ಖಾನೆ ರಸ್ತೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.ಮಂಡ್ಯ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗಳನ್ನು ಬಹಳ ವರ್ಷಗಳ ಹಿಂದೆಯೇ ಅನುಷ್ಠಾನಗೊಳಿಸಿರುವುದರಿಂದ ಒಳಚರಂಡಿಯ ಬಹಳಷ್ಟು ದುರಸ್ಥಿ ಕಾರ್ಯಗಳು ಬರುತ್ತಿವೆ. ಇವುಗಳನ್ನು ದುರಸ್ಥಿಗೊಳಿಸಲಾಗುತ್ತಿದ್ದು ಯಾವುದೇ ದೂರುಗಳು ಬಾರದ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ಕಾರವಾರ, ಮಂಡ್ಯ, ತುಮಕೂರಲ್ಲಿ ಕ್ಯಾನ್ಸರ್ ಆಸ್ಪತ್ರೆ: ಶರಣ ಪ್ರಕಾಶ್
ಕ್ಯಾನ್ಸರ್ ಚಿಕಿತ್ಸೆ ಪಡೆಯಲು ರಾಜ್ಯದ ಕಾರವಾರ, ಮಂಡ್ಯ, ತುಮಕೂರು ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಚಿಂತನೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.ಸೋಮವಾರ ಕಾಂಗ್ರೆಸ್ ಪಕ್ಷದ ಎಂ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಕಲಬುರಗಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಇದ್ದು, ಈಗ 250 ಹಾಸಿಗೆಗಳ ಆಸ್ಪತ್ರೆ ಕಲ್ಪಿಸಲು ಉದ್ದೇಶಿಸಲಾಗಿದೆ. ಕಿದ್ವಾಯಿ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡ್‌ದಾರರಿಗೆ ಶೇ.30 ರಿಯಾಯಿತಿ ನೀಡಲಾಗುತ್ತಿದೆ. ಖಾಸಗಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಗಳಿಗೆ ಹೋಲಿಸಿದರೆ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ದರ ಅತ್ಯಂತ ಕಡಿಮೆ ಇದೆ. ಈ ಶುಲ್ಕ ಕಡಿಮೆ ಮಾಡಲು ಆರ್ಥಿಕ ಇಲಾಖೆ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.
ಜಿಲ್ಲಾಸ್ಪತ್ರೆಗಳಲ್ಲೂ ಚಿಕಿತ್ಸೆ: ರಾಜ್ಯದ ಎಲ್ಲ 31 ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲು ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಬೆಳಗಾವಿಯಲ್ಲಿ ಈಗಿರುವ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಅಗತ್ಯ ಜಾಗ ಇಲ್ಲ ಎಂದರು. ಇದಕ್ಕೆ ನಾಗರಾಜು ಅವರು ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ಸ್ಥಾಪಿಸಲು ಮುಂದೆ ಬಂದರೆ ತಮ್ಮ ಶಿಕ್ಷಣ ಸಂಸ್ಥೆ ಜಾಗ ನೀಡಲು ಸಿದ್ಧ ಎಂದು ಹೇಳಿದರು.ಮೂಲಸೌಕರ್ಯಕ್ಕೆ ಒತ್ತು: ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ, ಉಪಕರಣ ಕಲ್ಪಿಸಲಾಗುತ್ತಿದೆ. 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು 670 ಕೋಟಿ ಹಣ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.