ಕುವೆಂಪು ವಿವಿಯಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಚಾಲನೆ

KannadaprabhaNewsNetwork |  
Published : Mar 13, 2026, 01:30 AM IST
ಪೊಟೋ: 12ಎಸ್‌ಎಂಜಿಕೆಪಿ08ಶಂಕರಘಟ್ಟದ ಕುವೆಂಪು ವಿವಿ ಆವರಣದಲ್ಲಿ ಗುರುವಾರ 'ಸಹ್ಯಾದ್ರಿ ಉತ್ಸವ' ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವೆ ಡಾ. ಜಯಮಾಲಾ ಮಾತನಾಡಿದರು. | Kannada Prabha

ಸಾರಾಂಶ

ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ 2026ನೇ ಸಾಲಿನ ''''ಸಹ್ಯಾದ್ರಿ ಉತ್ಸವ'''' ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಗುರುವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ 2026ನೇ ಸಾಲಿನ ''''''''ಸಹ್ಯಾದ್ರಿ ಉತ್ಸವ'''''''' ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಗುರುವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸುಮಾರು 40ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ಕುವೆಂಪು ಪ್ರತಿಮೆಗೆ ಹಾರ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಸಾಂಪ್ರದಾಯಿಕವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಹ್ಯಾದ್ರಿ ಉತ್ಸವ ಹಾಗೂ ಪಥ ಸಂಚಲನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವೆ ಡಾ. ಜಯಮಾಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಜಯಮಾಲಾ, ನಾನು ಪುನರ್ವಸತಿಯ ಬಗ್ಗೆ ಸುದೀರ್ಘವಾಗಿ ಸಂಶೋಧನೆ ನಡೆಸಿ ಥೀಸಿಸ್ ಬರೆದಿದ್ದೇನೆ. ಅಲ್ಮಟ್ಟಿಯ ಅಣೆಕಟ್ಟು ಸಂತ್ರಸ್ತರ ನೋವು ಮತ್ತು ಅನುಭವಗಳನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಈ ಶೈಕ್ಷಣಿಕ ಸಾಧನೆಗಾಗಿ ಅಂದಿನ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಪಡೆದ ಸಾರ್ಥಕತೆ ನನಗಿದೆ. ನಿರಾಶ್ರಿತ ಭಾವ ಎಂಬುದು ಪ್ರತಿಯೊಬ್ಬ ಮನುಷ್ಯನನ್ನೂ ಕಾಡುವಂತಹದ್ದು, ಈ ಕಾರ್ಯಕ್ರಮಕ್ಕೆ ಬರಬೇಕೆಂಬ ಹಂಬಲ ನನಗಿತ್ತು, ಎಂದು ನೆನಪು ಮಾಡಿಕೊಂಡರು.

ಕುವೆಂಪು ಅವರ "ಹೋಗುವೆನು ನಾ ಮಲೆಯ ನಾಡಿಗೆ " ಎಂಬ ಸಾಲುಗಳನ್ನು ಸ್ಮರಿಸುತ್ತಾ, ಮಲೆನಾಡು ಅತ್ಯಂತ ನಯನ ಮನೋಹರವಾದ ಕಾಡುಗಳನ್ನು ಹೊಂದಿರುವ ತಾಣ. ಇದು ಕೇವಲ ಪ್ರಕೃತಿಯಲ್ಲ, ದೈತ್ಯ ಪ್ರತಿಭೆಗಳನ್ನು ನಾಡಿಗೆ ನೀಡಿದ ಪವಿತ್ರ ಭೂಮಿ ಎಂದು ಬಣ್ಣಿಸಿದರು.

ಜಗತ್ತು ಯುದ್ಧದ ಭೀತಿಯಿಂದ ತುಂಬಿದೆ. ಇಂತಹ ಸಮಯದಲ್ಲಿ ಮನುಷ್ಯನಿಗೆ ಎಲ್ಲಕ್ಕಿಂತ ಮೊದಲು ಬೇಕಾಗಿರುವುದು ಮಾನವೀಯತೆ. ಕುವೆಂಪು ಅವರು ಹೇಳಿದಂತೆ ಇದು ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಕನ್ನಡ ಸಿನಿಮಾ ರಂಗವು ಅತ್ಯಂತ ಉತ್ತುಂಗದಲ್ಲಿದ್ದ ಕಾಲದಲ್ಲಿ ತನ್ನ ಅಭಿನಯದ ಮೂಲಕ ಮನೆಮಾತಾದವರು ಡಾ. ಜಯಮಾಲಾ. ಅವರು ಕೇವಲ ಬೆಳ್ಳಿ ಪರದೆಯ ತಾರೆಯಲ್ಲ, ಸಾಧನೆಯ ಶಿಖರಕ್ಕೇರಿದ ಧ್ರುವತಾರೆ. ಅವರೊಟ್ಟಿಗಿನ ನೆನಪುಗಳು ಸದಾ ಹಸಿರು. ಅವರು ಅಭಿನಯಿಸಿದ ಚಿತ್ರಗಳು ''''''''ಸ್ವರ್ಣ ಕಮಲ'''''''' ಪ್ರಶಸ್ತಿ ಪಡೆದಿರುವುದು ಅವರ ಕಲಾತ್ಮಕ ಪ್ರತಿಭೆಗೆ ಸಾಕ್ಷಿ. ಅಂತಹ ಸಾಧಕಿ ನಮ್ಮ ನಡುವೆ ಇರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳು ಈ ಮೂರು ದಿನಗಳ ಕಾಲ ಎಲ್ಲವನ್ನೂ ಸಂಭ್ರಮದಿಂದ ಕಲಿಯಬೇಕು. ಇದು ಕೇವಲ ಸ್ಪರ್ಧೆಯಲ್ಲ, ನಿಮ್ಮೊಳಗಿನ ಕಲೆ ಪ್ರದರ್ಶಿಸಲು ಸಿಕ್ಕಿರುವ ಸುವರ್ಣ ಅವಕಾಶ, ಬಳಸಿಕೊಳ್ಳಿ ಎಂದರು.

ವೇದಿಕೆಯಲ್ಲಿ ವಿವಿಯ ಕುಲಸಚಿವ ಎ.ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್.ರಮೇಶ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಜಿ. ಪ್ರಶಾಂತ್ ನಾಯಕ್, ಪ್ರೊ. ವಿಜಯಕುಮಾರ, ಪ್ರೊ. ವೆಂಕಟೇಶ್, ಪ್ರೊ. ಸತ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ಪಥಸಂಚಲನ: ಪಥ ಸಂಚಲನದಲ್ಲಿ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾವಾಡಿ, ಕಂಸಾಳೆ, ಕೊಡವ ನೃತ್ಯ, ನವದುರ್ಗೆಯರ ವೇಷಧಾರಿಗಳು, ಪೂಜಾ ಕುಣಿತ, ನಂದಿ ಕೋಲು, ಕಾಡು ಮನುಷ್ಯರ ವೇಷ ಹಾಗೂ ವೀರಗಾಸೆ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವಿಶೇಷವಾಗಿ ಕುವೆಂಪು ಶತಮಾನೋತ್ಸವ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆಯ ಪಥ ಸಂಚಲನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಾಹಿತ್ಯದ ಮೂಲಕ ಜಗತ್ತಿಗೆ ಕೊಡುಗೆ ನೀಡಿದ ಜೈನಧರ್ಮ: ಪ್ರೊ. ಶಾಂತಿನಾಥ ದಿಬ್ಬದ