ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕ್ರಿಮ್ಸ್)ಯ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೆ, ಅಸಹಾಯಕರಾಗಿರುವ ಶಾಸಕ ಸತೀಶ ಸೈಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅವರದೆ ಕಾಂಗ್ರೆಸ್ ಸರ್ಕಾರ ಇದೆ. ಉಸ್ತುವಾರಿ ಸಚಿವರೂ ಇದ್ದಾರೆ. ಸತೀಶ ಸೈಲ್ ಶಾಸಕರಾಗಿದ್ದಾರೆ. ಹಾಗಿದ್ದೂ ಕ್ರಿಮ್ಸ್ ಸುಧಾರಣೆ ಮಾಡಲಾಗದೆ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಸತೀಶ ಸೈಲ್ ಶಾಸಕರಾಗಿ ಮುಂದುವರಿಯುವುದು ಸರಿಯಲ್ಲ.ಚುನಾವಣೆ ಸಂದರ್ಭದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದು ಸೈಲ್ ಅವರಿಗೆ ನೆನಪಿದೆಯೇ. ಒಂದು ವರ್ಷದಲ್ಲಿ ಈ ದಿಸೆಯಲ್ಲಿ ನಿಮ್ಮ ಪ್ರಯತ್ನ ಶೂನ್ಯವಲ್ಲದೆ ಮತ್ತಿನ್ನೇನು. ಆಡಳಿತ ಪಕ್ಷದ ಶಾಸಕರಾಗಿ ನಿಮ್ಮ ಮಾತನ್ನು ಯಾವ ಅಧಿಕಾರಿಯೂ ಕೇಳುತ್ತಿಲ್ಲ. ನಿಮ್ಮಿಂದ ಏನೂ ಆಗುತ್ತಿಲ್ಲ ಎಂದರೆ ನೀವು ಶಾಸಕರಾಗಿ ಅಧಿಕಾರದಲ್ಲಿ ಏಕೆ ಮುಂದುವರಿಯಬೇಕು ಎಂದೂ ಪ್ರಶ್ನಿಸಬೇಕಾಗಿದೆ. ಅಷ್ಟಕ್ಕೂ ಮಾಧ್ಯಮ ಪ್ರತಿನಿಧಿಗಳು ನೀವು ಅಸಹಾಯಕರಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ನನ್ನಿಂದ ಆಗುವುದಿಲ್ಲ ಎಂದು ಕೈ ಎತ್ತುತ್ತೇನೆ ಎಂದು ಸೈಲ್ ಅವರೇ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರಾಗಿ ಈ ರೀತಿ ಹೇಳುವುದು ನಾಚಿಕೆಗೇಡು. ಅಷ್ಟೇ ಅಲ್ಲ, ಶಾಸಕಾಂಗಕ್ಕೆ ಇರುವ ಗೌರವಕ್ಕೂ ಚ್ಯುತಿ ಮಾಡಿದಂತಾಗಿದೆ. ಮೇಲಾಗಿ ಇವರಿಗೆ ಮತ ನೀಡಿದ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದಂತಾಗಿದೆ.
ಮೆಡಿಕಲ್ ಕಾಲೇಜು ಸುಧಾರಣೆಯ ಗುತ್ತಿಗೆ ಪಡೆದಿರುವ ಸಮಾಜಸೇವಕ ಈಗೇಕೆ ಮಾತನಾಡುತ್ತಿಲ್ಲ. ಸತೀಶ ಸೈಲ್ ಅವರೊಂದಿಗೆ ಇದ್ದು ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡುವ ಗುತ್ತಿಗೆ ಪಡೆದವರು ಮೌನಕ್ಕೆ ಶರಣಾಗಿರುವುದು ವಿಪರ್ಯಾಸವಾಗಿದೆ. ಇವರಿಗೆಲ್ಲ ಜನರ ಬಗ್ಗೆ ಕಾಳಜಿ ಇದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಎಂದು ಬಿಜೆಪಿ ಕಾರವಾರ ನಗರ ಮಂಡಲದ ಅಧ್ಯಕ್ಷ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲದ ಅಧ್ಯಕ್ಷ, ಸುಭಾಷ ಗುನಗಿ, ಅಂಕೋಲಾ ಮಂಡಳದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಅಮದಳ್ಳಿ, ವೃಂದಾ ದಾಮ್ಸಡೇಕರ, ವೈಶಾಲಿ ತಾಂಡೇಲ, ಮಾಲಾ ಹುಲ್ಸವಾರ, ಸುಜಾತಾ ಬಾಂದೇಕರ ಹಾಗೂ ಕಲ್ಪನಾ ನಾಯ್ಕ ತಿಳಿಸಿದ್ದಾರೆ.