ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಬಂಜಾರ ಸಂಘದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಯಾರೂ ಕೂಡ ಕುಡಿತ, ಮತ್ತಿತರೆ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸೇವಾಲಾಲರು ತಿಳಿಸಿದ್ದು, ಅವರು ತೋರಿದ ಮಾರ್ಗದಲ್ಲಿ ನಡೆದು, ಅವರ ತತ್ವಗಳನ್ನು ಅಳವಡಿಸಿಕೊಂಡರೆ ಜೀವನ ಉತ್ತಮಗೊಳ್ಳುತ್ತದೆ ಎಂದರು.
ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕುವ ರೀತಿಯಲ್ಲಿ ಸೇವಾಲಾಲರ ಜಯಂತಿಗೆ ಸಹ ವಿವಿಧ ತಾಂಡಾಗಳಿಂದ ಭಕ್ತಾದಿಗಳು ಮಾಲೆ ಧರಿಸಿ ಎಲ್ಲ ದುಶ್ಚಟಗಳಿಂದ ದೂರವಾಗಿ ಶ್ರದ್ದೆ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಎಂದ ಅವರು ಮುಂದಿನ ದಿನಗಳಲ್ಲಿ ಸಮಾಜದ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಟಿ.ಗಣೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕ್ರಿ ಪೂ 5 ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಬಯಲಿನ ನಾಗರಿಕತೆ ಯಿಂದ ಬಂಜಾರ ಸಮುದಾಯದ ಇತಿಹಾಸ ಇರುವುದು ಕಂಡು ಬಂದಿದ್ದು, ಈ ಸಮಾಜದ ಉದ್ದಾರಕರಾದ ಕ್ರಾಂತಿವೀರ, ಸಮಾಜ ಸುಧಾರಕ, ಸಮಾಜದ ಹರಿಕಾರರಾದ ಸಂತ ಸೇವಾಲಾಲರು 1739 ಫೆಬ್ರವರಿ 15 ರಂದು ಸೂರಗೊಂಡನಕೊಪ್ಪ ದಲ್ಲಿ ಜನ್ಮತಾಳಿದರು. ಕನಕದಾಸರು, ಪುರಂದರದಾಸರಂತಹ ದಾರ್ಶನಿಕರ ಸಾಲಿನಲ್ಲಿ ಸೇವಾಲಾಲರು ನಿಲ್ಲುತ್ತಾರೆ ಎಂದು ಹೇಳಿದರು.
ಭೋಗ್, ಈತಿ ಮತ್ತು ಪ್ರಾರ್ಥನೆಯನ್ನು ಸಮಾಜದವರು ಅನುಸರಿಸಬೇಕು ಎಂದು ತಿಳಿಸಿದ್ದ ಸೇವಾಲಾಲರು 18 ನೇ ಶತಮಾನದಲ್ಲಿ ಅಂಧಕಾರದಲ್ಲಿದ್ದ ಸಮಾಜಕ್ಕೆ ದಾರಿ ದೀಪವಾಗಿದ್ದರು. ಆವಾಗಲೇ ಅವರು ಮುಂದಿನ ದಿನಗಳಲ್ಲಿ ನೀರನ್ನು ಸಹ ಕೊಂಡುಕೊಳ್ಳುವ ಪರಿಸ್ಥಿತಿ ಬರುತ್ತೆ ಎಂದು ಎಚ್ಚರಿಕೆ ನೀಡಿದ್ದರು ಎಂದು ತಿಳಿಸಿದರು.