ಕನ್ನಡಪ್ರಭ ವಾರ್ತೆ ಮಡಿಕೇರಿ ಕರ್ನಾಟಕದ ಜೀವನದಿ ಕಾವೇರಿ ಉಗಮತಾಣ ತಲಕಾವೇರಿಯಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಬೇಬಿಗ್ರಾಮ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಕರ್ನಾಟಕ ನಾಮಕರಣದ 50ನೇ ವರ್ಷ ಪ್ರಯುಕ್ತ ಕನ್ನಡ ದ್ವಜವನ್ನು ಹಾರಿಸುವ ಮೂಲಕ ವಿಶೇಷವಾಗಿ ರಾಜ್ಯೋತ್ಸವ ಆಚರಿಸಿದರು. ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ನೂರಾರು ಭಕ್ತರಿಗೆ ಸಿಹಿ ವಿತರಿಸಿ ಕನ್ನಡ ಉಳಿಸಿ ಬೆಳಿಸಿ ಎಂದು ಕಿವಿಮಾತನ್ನು ಉಭಯ ಶ್ರೀಗಳು ಹೇಳಿದರು . ಬೇಬಿಗ್ರಾಮ ಚಂದ್ರವನ ಆಶ್ರಮದ ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಮಾತನಾಡಿ, ಕನ್ನಡ ಉಳಿಯಬೇಕು ಬೆಳೆಯಬೇಕು ಎಂದರೆ ನಾವೆಲ್ಲರೂ ಕೂಡಾ ಒಮ್ಮನಸ್ಸಿನಿಂದ ಒಟ್ಟಾರೆಯಾಗಿ ಇರಬೇಕು. ಇವತ್ತು ಕನ್ನಡನಾಡಿನ ಗಡಿ ಸಮಸ್ಯೆ , ಜಲ ಸಮಸ್ಯೆಗಳಿಗೆ ಪರಿಹಾರ ಎಂದರೆ, ಕನ್ನಡಿಗರಲ್ಲಿ ನಮ್ಮ ನಾಡಿನ ಬಗ್ಗೆ ಪ್ರೀತಿ ಸದಾ ಇರಬೇಕೆಂದರು. ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಬೆಳಗಾವಿ ಭಾಗದಲ್ಲಿ ಗಡಿ ಸಮಸ್ಯೆ ಕೂಡ ಇದೆ. ಕನ್ನಡನಾಡಿನ ಈ ಸಮಸ್ಯೆಗೆ ಪರಿಹಾರ ಎಂದು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಹೊಣೆಗಾರಿಕೆ ಕರ್ನಾಟಕ ಸರ್ಕಾರದ ಮೇಲಿದೆ ಎಂದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ರಮೇಶ ಹೊಳ್ಳ, ಚಂದ್ರವನ ರೋಟರಿ ಸಂಸ್ಥೆಯ ಪ್ರಮುಖರಾದ ಶೇಖರ ಕುಂಬಾರ, ಸಂಜಯ ಸೇರಿದಂತೆ ಹಲವರಿದ್ದರು. ತಲಕಾವೇರಿ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಪೊನ್ನಣ್ಣ ಸ್ವಾಗತಿಸಿದರು.