ಸಂಡೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಮಾ.31ರ ಅಂತ್ಯಕ್ಕೆ ₹2,06,014 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ. ವೀರೇಶ್ ತಿಳಿಸಿದರು.
ಪಟ್ಟಣದ ವಾಲ್ಮೀಕಿ ಮಹರ್ಷಿ ಕಲ್ಯಾಣ ಮಂಟಪದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆಯಲ್ಲಿ ಅವರು ಮಾಹಿತಿ ನೀಡಿದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಕೆ. ಶಿವಲಿಂಗಪ್ಪ ಸಂಘದ 2024-25ನೇ ಸಾಲಿನ ಆಡಿಟ್ ಆಗಿರುವ ಜಮಾ-ಖರ್ಚು, ಲಾಭ-ನಷ್ಟದ ವಿವರವನ್ನು ಮಂಡಿಸಿದರು. 2025-26ನೇ ಸಾಲಿನ ಅಂದಾಜು ಆಯ-ವ್ಯಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
2024-25ರ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘದ ಸದಸ್ಯರ ಸಂಖೆ 3222 ಇದ್ದು, ಸದಸ್ಯರ ಷೇರು ಬಂಡವಾಳ ಹಾಗೂ ಸರ್ಕಾರದ ಷೇರು ಬಂಡವಾಳ ಸೇರಿ ಒಟ್ಟು ₹1,15,85,248 ಇದೆ. ಸದಸ್ಯರ ಠೇವಣಿ ವರ್ಷದ ಅಂತ್ಯಕ್ಕೆ ₹4,84,965 ಇದೆ. ಸಂಘದಿಂದ ಒಟ್ಟು 969 ಸದಸ್ಯರಿಗೆ 6,82,48,000 ಕೆಸಿಸಿ ಸಾಲ ವಿತರಿಸಲಾಗಿದೆ. 23 ಸದಸ್ಯರಿಗೆ 72,75,000 ಮಧ್ಯಮಾವಧಿ ಸಾಲ ವಿತರಿಸಲಾಗಿದೆ ಎಂದರು.ಬ್ಯಾಂಕಿನ ನಿರ್ದೇಶಕರಾದ ಜೆ.ಎಂ. ಶಿವಪ್ರಸಾದ್ ಸಂಘದಲ್ಲಿ ಸಿಗುವ ಸಾಲ ಸೌಲಭ್ಯಗಳ ಕುರಿತು ವಿವರಿಸಿ, ಶೇ.0 ದರದಲ್ಲಿ ಮೂರು ಲಕ್ಷ ರು. ವರೆಗೆ ಕೃಷಿ ಸಾಲ ನೀಡಲಾಗುತ್ತದೆ. ₹10 ಲಕ್ಷದವರೆಗೆ ಶೇ.3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಟ್ರ್ಯಾಕ್ಟರ್ ಸಾಲ, ಮಹಿಳಾ ಸ್ವಸಹಾಯ ಗುಂಪಿಗೆ ₹3 ಲಕ್ಷದವರೆಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಸದಸ್ಯರಾದ ವಸಂತಕುಮಾರ್ ಮಾತನಾಡಿ, ಈ ಬಾರಿ ರೈತರು ಯೂರಿಯಾ ರಸಗೊಬ್ಬರದ ತೊಂದರೆ ಅನುಭವಿಸುವಂತಾಯಿತು. ಪಹಣಿ ಕೇಳಿ ರಸಗೊಬ್ಬರ ವಿತರಿಸಿದ್ದರೆ, ಚೆನ್ನಾಗಿತ್ತು. ಆಧಾರ್ ಕಾರ್ಡ್ ಕೇಳಿ ರಸಗೊಬ್ಬರ ವಿತರಿಸಿದ್ದಕ್ಕೆ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ದೊರೆಯಲಿಲ್ಲ. ಆಧಾರ್ ಕಾರ್ಡ್ ಪಡೆದು ರಸಗೊಬ್ಬರ ವಿತರಿಸಿದ್ದೇಕೆ? ಎಂದು ಪ್ರಶ್ನಿಸಿದರು.ಅಧ್ಯಕ್ಷ ಜಿ. ವೀರೇಶ್ ಪ್ರತಿಕ್ರಿಯಿಸಿ, ತಹಶೀಲ್ದಾರ್ ನಿರ್ದೇಶನದಂತೆ ಆಧಾರ್ ಕಾರ್ಡ್ ಪಡೆದು ರಸಗೊಬ್ಬರ ವಿತರಿಸಿದೆವು. ಈ ಬಾರಿ ರೈತರು ರಾತ್ರಿ 1-2 ಗಂಟೆಯಿಂದ ಕಾದು ಕುಳಿತಿದ್ದನ್ನು ನೋಡಿದ್ದೇವೆ. ನಮಗೆ ಖೇಧವೆನಿಸಿತು. ಮುಂದಿನ ಬಾರಿ ಸಕಾಲಕ್ಕೆ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಎಂ.ಎಲ್.ಕೆ. ನಾಯ್ಡು ಮಾತನಾಡಿ, ನ್ಯಾನೋ ಯೂರಿಯಾ, ಡ್ರೋನ್ ಮೂಲಕ ರಸಗೊಬ್ಬರ ಸಿಂಪರಣೆ ಕುರಿತು ರೈತರಲ್ಲಿ ಗೊಂದಲವಿದೆ. ಈ ಕುರಿತು ಕೃಷಿ ಇಲಾಖೆಯ ಸಹಯೋಗದೊಂದಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಿ, ಅದರ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕಿದೆ. ಕಡಿಮೆ ಖರ್ಚಿನಲ್ಲಿ ಅದು ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕಿದೆ ಎಂದು ತಿಳಿಸಿದರು.ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಶಿವಲಿಂಗಪ್ಪ ಸ್ವಾಗತಿಸಿ, ನಿರೂಪಿಸಿದರು. ಉಪಾಧ್ಯಕ್ಷ ಕೆ. ಎರ‍್ರಿಸ್ವಾಮಿ ವಂದಿಸಿದರು. ಸಂಘದ ನಿರ್ದೇಶಕರಾದ ಪಿ.ಎಸ್. ಧರ್ಮಾನಾಯ್ಕ, ತುಮಟಿ ಅಂಜಿನಪ್ಪ, ಗಿರಿಜಮ್ಮ, ಹೊಸಳ್ಳಿ ನಾಗಮ್ಮ, ಎನ್. ಚನ್ನಯ್ಯ, ಹುಳ್ಳಿ ಸುಬ್ಬಣ್ಣ, ಚನ್ನಬಸಪ್ಪ ಗಡಂಬ್ಲಿ, ಎಂ.ಅಲ್ಲಾಭಕ್ಷಿ, ಎಂ.ಸುಭಾಷಚಂದ್ರ, ಬಿಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿ ಎಂ. ರಮೇಶ, ನೂರಾರು ಸದಸ್ಯರು ಸಭೆಯಲ್ಲಿ ಇದ್ದರು.