ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಲೇ ನಾನು ಯಾವುದೇ ನಿರ್ಧಾರ ಪ್ರಕಟಿಸುವುದಿಲ್ಲ. ನಾನು ಕೇಳಿರುವ ಮೂರು ಪ್ರಶ್ನೆಗಳಿಗೂ ಬಿಜೆಪಿ ನಾಯಕರು ಉತ್ತರ ನೀಡಿಲ್ಲ. ಹೀಗಾಗಿ ನನ್ನ ಹಿತೈಷಿಗಳ, ಹಿರಿಯರ ಮತ್ತು ಬಿಜೆಪಿ ಕಾರ್ಯಕರ್ತರ ಸಭೆ ಕರೆದು, ಅವರ ಅಭಿಪ್ರಾಯ ತಿಳಿದುಕೊಂಡು, ಹಿರಿಯರ ಮಾರ್ಗದರ್ಶನ ಪಡೆದುಕೊಂಡ ಮೇಲೆ ಮುಂದಿನ ನಿರ್ಧಾರದ ಕುರಿತು ತೀರ್ಮಾನ ಮಾಡುತ್ತೇನೆ ಎಂದರು.ಕೊಪ್ಪಳ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆ ಕರೆಯುತ್ತೇನೆ, ಯಾರು ಬರುತ್ತಾರೆ, ಎಷ್ಟು ಜನ ಬರುತ್ತಾರೆ ಎನ್ನುವುದು ಅಂದೇ ಗೊತ್ತಾಗುತ್ತದೆ ಎಂದರು.ನನಗೆ ಅನ್ಯಾಯವಾಗಿದೆ ಎನ್ನುವ ಕೂಗು ಕ್ಷೇತ್ರಾದ್ಯಂತ ಎದ್ದಿದೆ. ಹೀಗಾಗಿ, ಅವರ ಅಭಿಪ್ರಾಯ ಪಡೆಯಬೇಕಾಗಿದೆ. ಅವರ ಅಭಿಪ್ರಾಯ ಪಡೆಯದ ಹೊರತು ನಾನು ಏನೂ ಹೇಳುವುದಿಲ್ಲ ಎಂದರು.
ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಹೈಕಮಾಂಡ್ ಡಾ.ಕೆ.ಬಸವರಾಜರನ್ನು ಘೋಷಣೆ ಮಾಡಿದೆ. ಅವರಿಗೆ ನಾನು ಶುಭ ಹಾರೈಸುತ್ತೇನೆ. ಆದರೆ ಇಷ್ಟೊಂದು ಅಭಿವೃದ್ಧಿ ಮಾಡಿ, ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡಿರುವ ನನಗೆ ಟಿಕೆಟ್ ತಪ್ಪಿಸಿದ್ದು ಯಾಕೆ ಮತ್ತು ಯಾರು ಎಂದು ಹೇಳುವಂತೆ ಕೇಳಿದರೂ ಯಾಕೆ ಹೇಳುತ್ತಿಲ್ಲ ಎಂದು ಮತ್ತೆ ಪ್ರಶ್ನಿಸಿದರು.ನನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು. ಸರಿ ಮಾಡೋಣ ಎಂದರು. ಏನು ಸರಿ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಅವರ ಬಳಿ ಸರಿಯಾದ ಉತ್ತರವಿರಲಿಲ್ಲ. ಹೀಗಾಗಿ, ನಾನು ಹೆಚ್ಚು ಮಾತನಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾಂಗ್ರೆಸ್ ನಾಯಕರು ಕಾಳಜಿಗೆ ಕರೆ ಮಾಡಿ ಮಾತನಾಡಿದ್ದಾರೆಯೇ ಹೊರತು ಪಕ್ಷ ಸೇರ್ಪಡೆಯಾಗುವ ಕುರಿತು ಏನೂ ಮಾತನಾಡಿಲ್ಲ. ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಇದೇ ವೇಳೆ ಸಂಗಣ್ಣ ಕರಡಿ ತಿಳಿಸಿದರು.
ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ಶಾಸಕನನ್ನಾಗಿ ಮಾಡಿ, ಎರಡು ಬಾರಿ ಸಂಸದನನ್ನಾಗಿ ಮಾಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರುಪಾಯಿ ಅಭಿವೃದ್ಧಿ ಮಾಡುವುದಕ್ಕೆ ಅವಕಾಶ ನೀಡಿದ್ದಕ್ಕಾಗಿ ನಾನು ಋಣಿಯಾಗಿದ್ದೇನೆ ಎಂದರು.