ತಂದೆ ಕನಸು ಈಡೇರಿಸುವ ಆಸೆ ಹೊಂದಿರುವ ಸಂಗೀತಾ

KannadaprabhaNewsNetwork |  
Published : Apr 10, 2026, 02:00 AM IST
9ಕೆಕೆಆರ್2:ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಮಗಳು ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಟಾಪರ್ ಆದ ಹಿನ್ನಲೆ ತಾಯಿ ಶ್ವೇತಾ ಅವರು ಸಂಗೀತಾಳಿಗೆ ಸಿಹಿ ತಿನಿಸಿದರು.  | Kannada Prabha

ಸಾರಾಂಶ

ಪಿಯುಸಿ ಕನ್ನಡ ವಿಷಯದಲ್ಲಿ 100, ಸಂಸ್ಕೃತ 99, ಕನ್ನಡ ಐಚ್ಛಿಕ 100, ಇತಿಹಾಸ 99, ರಾಜ್ಯಶಾಸ್ತ್ರ 100, ಶಿಕ್ಷಣ 100 ಒಟ್ಟು 600 ಕ್ಕೆ 598 ಅಂಕ ಪಡೆದಿದ್ದಾಳೆ

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಬಡತನದ ಹಿನ್ನೆಲೆ ನಮ್ಮ ತಂದೆ ಎಲ್‌ಎಲ್‌ಬಿಯನ್ನು ಅರ್ಧಕ್ಕೆ ಬಿಟ್ಟು ಊರಿಗೆ ಬಂದ ಕಾರಣ ಅವರ ವಕೀಲ ಆಗುವ ಕನಸು ಈಡೇರಲಿಲ್ಲ. ಆ ಕನಸನ್ನು ನಾನು ಈಡೇರಿಸುತ್ತೇನೆ. ನಾನು ಸಹ ಎಲ್‌ಎಲ್‌ಬಿ ಓದಿ ವಕೀಲೆ ಆಗುತ್ತೇನೆ ಎನ್ನುತ್ತಾಳೆ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಟಾಪರ್‌ ಸ್ಥಾನ ಪಡೆದಿರುವ ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್ 99.66% ಪ್ರತಿಶತ ಗಳಿಸಿದ್ದಾಳೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದೂ ಪಿಯು ಕಾಲೇಜಿನಲ್ಲಿ ಸಂಗೀತಾ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಳು. ಪಿಯುಸಿ ಕನ್ನಡ ವಿಷಯದಲ್ಲಿ 100, ಸಂಸ್ಕೃತ 99, ಕನ್ನಡ ಐಚ್ಛಿಕ 100, ಇತಿಹಾಸ 99, ರಾಜ್ಯಶಾಸ್ತ್ರ 100, ಶಿಕ್ಷಣ 100 ಒಟ್ಟು 600 ಕ್ಕೆ 598 ಅಂಕ ಪಡೆದಿದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿ ರಾಜ್ಯಕ್ಕೆ ಕಲಾ ವಿಭಾಗ ಪಿಯುಸಿಯಲ್ಲಿ ಟಾಪರ್ ಆಗಿದ್ದಾರೆ.

ಕೊಟ್ಟೂರಿನಲ್ಲಿಯೇ ಇದ್ದು ನಿತ್ಯ ಅಭ್ಯಾಸಕ್ಕಾಗಿ ಹೆಚ್ಚಿನ ಆದ್ಯತೆ ನೀಡಿದ್ದಾಳೆ. ಅಲ್ಲಿಯ ಉಪನ್ಯಾಸ ವರ್ಗ ಆಕೆಗೆ ಸಾಥ್ ನೀಡಿದೆ. ಅದರ ಜತೆಗೆ ಓದಬೇಕು ಎಂಬ ಛಲ ಆಕೆಯನ್ನು ರಾಜ್ಯಕ್ಕೆ ಟಾಪರ್ ಸ್ಥಾನಕ್ಕೆ ಕೊಂಡೋಯ್ದಿದೆ.

ಬಡ ಕುಟುಂಬ ವರ್ಗದ ಸಂಗೀತಾ ತಂದೆ ತಾಯಿಗೆ ನಾಲ್ವರು ಮಕ್ಕಳು. ಅಕ್ಕ ಐಶ್ವರ್ಯ ನರ್ಸಿಂಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದಾಳೆ. ಇನ್ನೊಬ್ಬ ಅಕ್ಕ ನಾಗಮ್ಮ ಸಹ ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ಸಂಗಮೇಶಗೌಡ ಹಾಗೂ ಸಂಗೀತ ಇಬ್ಬರು ಅವಳಿ ಜವಳಿ ಮಕ್ಕಳು. ಸಂಗಮೇಶ ಸಹ ಪಿಯುಸಿ ಸೈನ್ಸ್‌ನಲ್ಲಿ ಈ ಸಲ 94% ಪ್ರತಿಶತ ಗಳಿಸಿದ್ದಾನೆ.

ತಂದೆ ಮಂಗಳೂರು ಗ್ರಾಮದಲ್ಲಿ ತಮಗಿರುವ ಐದು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಬಡ ಕುಟುಂಬದಲ್ಲಿ ಮಕ್ಕಳನ್ನು ಉನ್ನತ ಅಭ್ಯಾಸ ಮಾಡಿಸಬೇಕು ಎಂದು ಅವರಿಗೆ ಶೈಕ್ಷಣೀಕ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇತ್ತ ತಾಯಿ ಶ್ವೇತಾ ಅಂಗನವಾಡಿ ಶಿಕ್ಷಕಿ. ತಮ್ಮ ಮಕ್ಕಳನ್ನು ಬಾಲ್ಯದಿಂದಲೇ ಕಲಿಕೆಗೆ ಪ್ರೋತ್ಸಾಹ ಮಾಡುತ್ತಾ ಬಂದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಗಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ಸಂಗೀತಾ ಪಿಯುಸಿಯನ್ನು ಕೊಟ್ಟೂರಿನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾಳೆ. ಸಂಗೀತಾ ಸಾಧನೆಗೆ ಮಂಗಳೂರು ಗ್ರಾಮದವರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

ನಾನು ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಿಂದ ನಿತ್ಯ ವ್ಯಾಸಂಗದಲ್ಲಿ ತೊಡಗುತ್ತಿದ್ದೆ. ಮೊದಲಿಗೆ ನನ್ನ ತಂದೆ ಶೇಖರಗೌಡ ನಾನು ನನ್ನು ಐದು ಎಕರೆ ಹೊಲವನ್ನಾದರೂ ಮಾರಿ ಓದಿಸುತ್ತೇನೆ ಎಂಬ ಮಾತು ನನ್ನ ಮೇಲೆ ಪರಿಣಾಮ ಬೀರಿತು. ನನ್ನ ಕಾಲೇಜಿನ ಉಪನ್ಯಾಸಕರು ಸಹ ಪ್ರೋತ್ಸಾಹ ಮಾಡಿದರು. ಮುಂದೆ ನಾನು ಎಲ್.ಎಲ್.ಬಿ ಓದಬೇಕು ಎಂಬ ಆಸೆ ಹೊಂದಿದ್ದನೆ. ನನ್ನ ತಂದೆ ತಾವು ವಕೀಲರಾಗಬೇಕು ಎಂದುಕೊಂಡಿದ್ದರು. ಆ ಕನಸ್ಸನ್ನು ನಾನು ವಕೀಲೆ ಆಗಿ ಈಡೇರಿಸುತ್ತೇನೆ ಎಂದು ಮಂಗಳೂರು ಗ್ರಾಮದ ಪಿಯುಸಿ ಕಲಾ ವಿಭಾಗದ ಟಾಪರ್ ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.

ನಮ್ಮ ಮಗಳು ನಮ್ಮ ಮನೆಯ ಬಡತನ ಹಾಗೂ ಕಷ್ಟ ನೋಡಿ ತಾನು ಏನಾದರು ಸಾಧನೆ ಮಾಡಬೇಕು ಎಂಬ ಹಂಬಲದಿಂದ ಸದಾ ಅಭ್ಯಾಸದಲ್ಲಿ ಮಗ್ನನಾಗಿರುತ್ತಿದ್ದಳು. ಆಕೆಯ ಈ ಸಾಧನೆ ನಮಗೆ ಖುಷಿ ನೀಡಿದೆ. ಆಕೆಯ ಮುಂದಿನ ಶೈಕ್ಷಣೀಕ ಕನಸ್ಸನ್ನು ನಾವು ಈಡೇರಿಸಲು ಸಿದ್ದರಿದ್ದೇವೆ ಎಂದು ಸಂಗೀತಾ ತಾಯಿ ಶ್ವೇತಾ ಶೇಖರಗೌಡ ಪೊಲೀಸ್ ಪಾಟೀಲ್ ಹೇಳಿದ್ದಾರೆ.ಅ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಡಪದ ಅಪ್ಪಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ
ಸಮತೋಲಿತ ಆಹಾರದಿಂದ ಉತ್ತಮ ಆರೋಗ್ಯ