ಕನ್ನಡಪ್ರಭ ವಾರ್ತೆ ದಾವಣಗೆರೆನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಪಂ, ನಗರ ಪಾಲಿಕೆ, ನಗರಸಭೆ, ಗ್ರಾಪಂ ವ್ಯಾಪ್ತಿಗೊಳಪಡುವ ದಾವಣಗೆರೆ ಜಿಲ್ಲೆಯ 538 ಕೆರೆಗಳ ಹೂಳು ತೆಗೆಸುವುದು, ಕೆರೆ ಏರಿ ದುರಸ್ತಿ, ಕೋಡಿ ಬಿದ್ದು ಹರಿಯುವ ಹಳ್ಳಗಳನ್ನು ಸರಿಪಡಿಸುವ ಬಗ್ಗೆ ನಗರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರ ಸಭೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ನಗರ, ಗ್ರಾಮೀಣ ಕೆರೆಗಳಿಗೆ ಕಾಯಕಲ್ಪ ನೀಡುವ ಬಗ್ಗೆ, ಕೆರೆಗಳ ಅಭಿವೃದ್ಧಿ ಕುರಿತಂತೆ ಆಗಬೇಕಾದ ತುರ್ತು ಕಾರ್ಯಗಳ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳು ತುರ್ತಾಗಿ ಸಭೆ ಕರೆಯುವಂತೆ ರೈತ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ತಮ್ಮ ಕ್ಷೇತ್ರದ ಬಸವಾಪಟ್ಟಣ, ಹಾಲಸ್ವಾಮಿ ಮಠದ ಹಿಂಭಾಗದಲ್ಲಿ ಸುಮಾರು 600 ಅಡಿ ಅಗಲ, 3 ಕಿಮೀ ಉದ್ದ, 40 ಅಡಿ ಎತ್ತರವಿರುವ ಎರಡು ಗುಡ್ಡಗಳ ಮಧ್ಯೆ ಬ್ಯಾರೇಜ್ ನಿರ್ಮಿಸುವ ಕೆಲಸ ಆಗಬೇಕಾಗಿದೆ. ಮಾಯಕೊಂಡ ಹೊಸಕೆರೆ ಜಾಗದಲ್ಲಿ ಮಾರಿ ಕಣಿವೆಯಷ್ಟೇ ಜಾಗವಿದ್ದು, ಅರಣ್ಯ ಇಲಾಖೆ ಅನುಮತಿ ನೀಡಿದರೆ, ಅಂತರ್ಜಲ ವೃದ್ಧಿ, ಕಾಡು ಪ್ರಾಣಿಗಳು, ನಾಡ ಪ್ರಾಣಿಗಳು, ಪಕ್ಷಿಗಳು ಎದುರಿಸುವ ನೀರಿನ ಹಾಹಾಕಾರ ತಪ್ಪಿಸಲು ಸಾಧ್ಯವಿದೆ ಎಂದರು.
ನೆಲ, ಜಲ, ಪರಿಸರ ಆಂದೋಲನ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ದಾವಣಗೆರೆ ನಗರದ ಹಸಿರು ಸ್ವಚ್ಛತೆ ಆಂದೋಲನಾ ಸಂಘ, ಗ್ರಾಮೀಣಾಭಿವೃದ್ಧಿ ಸಂಘದ ಲಕ್ಷ್ಮಣ, ರೈತ ಮುಖಂಡರಾದ ಐಗೂರು ಶಿವಮೂರ್ತೆಪ್ಪ, ಕರುಣಾ ಜೀವ ಟ್ರಸ್ಟ್ ಪ್ರತಿನಿಧಿಗಳಾದ ಕತ್ತಲಗೆರೆ ತಿಪ್ಪಣ್ಣ, ಬಸವಾಪಟ್ಟಣ ರಾಜಣ್ಣ, ವಸಂತ ಮೆಡಿಕಲ್ಸ್, ಮಾಯಕೊಂಡ ಅಶೋಕ, ರಾಂಪುರ ಬಸವರಾಜ, ಮಿಯ್ಯಾಪುರ ತಿರುಮಲೇಶ, ಹೆಬ್ಬಾಳು ರಾಜಯೋಗಿ, ಮಾಯಕೊಂಡ ಪ್ರತಾಪ ಸಾಣಿಕೆರೆ ಟಿ.ಗುರುಮೂರ್ತಿ ಇತರರು ಇದ್ದರು.