ರೈತರು ತಮ್ಮ ಗೋವುಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಿ ವರ್ಣರಂಜಿತ ದಿರಿಸು ತೊಡೆಸಿ ಮೆರವಣಿಗೆಯಲ್ಲಿ ಸಾಗಿ ಗ್ರಾಮದ ಊರು ಬಾಗಿಲಿನಲ್ಲಿ ಕಿಚ್ಚು ಹಾಯಿಸಿದರು. ಗೋವುಗಳಿಗೆ ರೋಗರುಜಿನಗಳು ಬಾರದಿರಲಿ ಎಂದು ಅನ್ನ, ಮೊಸರು ಹಾಕಿದ ಅಮದು ಇಡುವ ಮೂಲಕ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಾಸುಗಳಿಗೆ ಅಲಂಕಾರ,ಮೆರವಣಿಗೆ ನಡೆಸಿದ್ದರೆ ನಗರದಲ್ಲಿ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ಗೋಪಾಲಕರ ತವರಾದ ಕಿಲಾರಿಪೇಟೆಯಲ್ಲಿ ಗೋಪೂಜೆಗೆ ಒತ್ತು ನೀಡಲಾಗಿತ್ತು.
ಸಂಕ್ರಾಂತಿ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ರಾಸುಗಳನ್ನು ತೊಳೆದು ಸಿಂಗರಿಸಿ ಮೆರವಣಿಗೆ ಮಾಡುವ ಸಂಪ್ರದಾಯ ಈ ಬಾರಿಯೂ ಮುಂದುವರೆದಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಯೂ ನಡೆಯಿತು.
ರೈತರು ತಮ್ಮ ಗೋವುಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಿ ವರ್ಣರಂಜಿತ ದಿರಿಸು ತೊಡೆಸಿ ಮೆರವಣಿಗೆಯಲ್ಲಿ ಸಾಗಿ ಗ್ರಾಮದ ಊರು ಬಾಗಿಲಿನಲ್ಲಿ ಕಿಚ್ಚು ಹಾಯಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ.
ಗೋವುಗಳಿಗೆ ರೋಗರುಜಿನಗಳು ಬಾರದಿರಲಿ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಅನ್ನ, ಮೊಸರು ಹಾಕಿದ ಅಮದು ಇಡುವ ಮೂಲಕ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ.
ಇದೇ ರೀತಿಯ ಸಂಭ್ರಮ ನಗರ ಪ್ರದೇಶದಲ್ಲೂ ಕೆಲವು ಭಾಗಗಳಲ್ಲಿ ಮುಂದುವರೆದಿದ್ದು ನಗರದ ಗೋಪಾಲಾಕರ ತವರಾದ ಕಿಲಾರಿಪೇಟೆಯಲ್ಲಿ ಸಂಕ್ರಾಂತಿ ಅಂಗವಾಗಿ ಅಲ್ಲಿನ ಗೋಪಾಲಕರು ತಮ್ಮ ರಾಸುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದರು.
ಕಿಲಾರಿಪೇಟೆಯ ರುಕ್ಮಿಣಿ,ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರತಿ ವರ್ಷದಂತೆ ಈ ವರ್ಷವೂ ಗೋವುಗಳನ್ನು ಅಲಂಕರಿಸಿ ಮೆರವಣಿಗೆ ನಡೆಸುತ್ತಿದ್ದ ಕಿಲಾರಿಪೇಟೆಯ ಗೋಪಾಲಕರು ಈ ಬಾರಿಯೂ ಗೋವುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಗೋವುಗಳಿಗೆ ಇಲ್ಲಿನ ಹಲವಾರು ಮುಖಂಡರು ಪಶು ಆಹಾರ, ಹಸಿ ಮೇವು ನೀಡಿ ಪೂಜೆ ಸಲ್ಲಿಸಿ ಗಮನ ಸೆಳೆದರು.
ಸಂಕ್ರಾಂತಿ ಅಂಗವಾಗಿ ವೇಣುಗೋಪಾಲಸ್ವಾಮಿಯ ಇಡೀ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದು, ತಮ್ಮ ಗೋವುಗಳಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಗೋಪಾಲಕರು ಪ್ರಾರ್ಥಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.