ಸತ್ತೆಗಾಲ ಯೋಜನೆನಿಂದ ಜಿಲ್ಲೆಗೆ ಅನುಕೂಲ: ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : May 06, 2025, 12:16 AM IST
ಪೊಟೋ೫ಸಿಪಿಟಿ೨:  ಚನ್ನಪಟ್ಟಣದ ತಾಪಂ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಗತಿಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಸತ್ತೆಗಾಲ ಯೋಜನೆ ಇಡೀ ರಾಜ್ಯದಲ್ಲೇ ಮಾದರಿ ಯೋಜನೆಯಾಗಿದೆ. ಸುಮಾರು 16 ಕಿ.ಮಿ. ಟನಲ್‌ನಲ್ಲೇ ನೀರು ಬರಲಿದ್ದು, ಇನ್ನು 600 ಮೀ ಕಾಮಗಾರಿ ಮಾತ್ರ ಬಾಕಿ ಇದೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ರಾಮನಗರ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸತ್ತೇಗಾಲ ಯೋಜನೆಯ ಕಾಮಗಾರಿ ಇನ್ನು 600 ಮೀಟರ್ ಮಾತ್ರ ಬಾಕಿ ಉಳಿದಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಯಿಂದ 3.5 ಟಿಎಂಸಿ ನೀರು ಸಿಗಲಿದ್ದು, ಜಿಲ್ಲೆಯ ಅಂತರ್ಜಲ ಹೆಚ್ಚಳವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತೆಗಾಲ ಯೋಜನೆ ಇಡೀ ರಾಜ್ಯದಲ್ಲೇ ಮಾದರಿ ಯೋಜನೆಯಾಗಿದೆ. ಸುಮಾರು 16 ಕಿ.ಮಿ. ಟನಲ್‌ನಲ್ಲೇ ನೀರು ಬರಲಿದ್ದು, ಇನ್ನು 600 ಮೀ ಕಾಮಗಾರಿ ಮಾತ್ರ ಬಾಕಿ ಇದೆ. ಈ ಯೋಜನೆಯಿಂದ ಸಂಪೂರ್ಣ ನೀರು ಒದಗಿಸುವ ಕೆಲಸ ಆಗಲಿದೆ. ಸತ್ತೆಗಾಲ ಯೋಜನೆಗೆ ಎಷ್ಟು ಬೇಕಾದರೂ ಅನುದಾನ ನೀಡಲು ನಮ್ಮ ಇಲಾಖೆ ಸಿದ್ಧವಿದೆ ಎಂದರು.ಉಪಚುನಾವಣೆಗೆ ಮುನ್ನಾ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರು. ಅನುದಾನ ನೀಡಲಾಗಿತ್ತು. ಈ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.ನನ್ನ ಕ್ಷೇತ್ರಕ್ಕೂ 500 ಕೋಟಿ ಅನುದಾನ ನೀಡಿರಲಿಲ್ಲ. ಅಷ್ಟ್ಟು ಅನುದಾನವನ್ನು ಚನ್ನಪಟ್ಟಣಕ್ಕೆ ನೀಡಿದ್ದೇನೆ. ಕೆಲವು ನೆನೆಗುದಿಗೆ ಬಿದ್ದು ಅವುಗಳನ್ನು ಪುನರ್‌ಪರಿಶೀಲನೆ ನಡೆಸಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವಂತೆ ತಿಳಿಸಿದ್ದೇನೆ ಎಂದರು.ಮನೆ ವಿತರಣೆಗೆ ಕ್ರಮ:

ಚನ್ನಪಟ್ಟಣದಲ್ಲಿ ನಿವೇಶನಗಳು ಮತ್ತು ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸೈಟು ಮತ್ತು ಮನೆಗಳ ಹಂಚಿಕೆ ಕಾರ್ಯ ಚುರುಕುಗೊಳ್ಳಲಿದೆ. ಚನ್ನಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಜಿಲ್ಲೆಯ ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಎಸ್.ಪಿ. ಶ್ರೀನಿವಾಸ್ ಗೌಡ, ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್ ಇತರರು ಇದ್ದರು.ಬಾಕ್ಸ್.....ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ನೆರವಿನ ಭರವಸೆ ಚನ್ನಪಟ್ಟಣ: ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಭರವಸೆ ನೀಡಿದರು.ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿದ್ದರಾಮಯ್ಯ ಅವರು ಸೋಮವಾರ ಸಭೆ ನಡೆಸಿದರು.ಈ ಸಂದರ್ಭದಲ್ಲಿ ಚನ್ನಪಟ್ಟಣ ತಾಪಂ ಕಚೇರಿಯ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಜೂಮ್ ಆಫ್ ಮೂಲಕ ಸಂಪರ್ಕ ಪಡೆದು, ಚನ್ನಪಟ್ಟಣ ಸ್ಟೇಡಿಯಂ ನಿರ್ಮಾಣ ಪ್ರಸ್ತಾಪ ಮಾಡಿ, ಅಗತ್ಯ ನೆರವು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸ್ಟೇಡಿಯಂ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.ಚನ್ನಪಟ್ಟಣ ಉಪಚುನಾವಣೆಗೆ ಮುಂಚಿತವಾಗಿ ತಟ್ಟೆಕೆರೆಯ ಬಳಿ ಕ್ರೀಡಾಂಗಣಕ್ಕೆ ಶಿವಕುಮಾರ್ ಗುದ್ದಲಿ ಪೂಜೆ ನೆರವೇರಿಸಿದ್ದರು..........

ಬಿಡದಿ ಟೌನ್‌ಶಿಫ್ ಕೈಬಿಡೋಲ್ಲ: ಡಿಕೆಶಿ ಸ್ಪಷ್ಟನೆಚನ್ನಪಟ್ಟಣ: ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ಕಳೆದುಕೊಳ್ಳಲಿರುವ ರೈತರು ನಿರೀಕ್ಷೆ ಮಾಡಿರುವುದಕ್ಕಿಂತ ಎರಡರಿಂದ ಮೂರುಪಟ್ಟು ಹಣ ಸಿಗುವಂತೆ ಮಾಡಲಾಗುವುದು. ಈ ಗ್ರೇಟರ್ ಬೆಂಗಳೂರು ಯೋಜನೆ ಇಡೀ ಬೆಂಗಳೂರಿಗೆ ಮಾದರಿಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಚನ್ನಪಟ್ಟಣದಲ್ಲಿ ಪ್ರಗತಿಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಿದರೂ ಡಿ.ಕೆ.ಶಿವಕುಮಾರ್ ಒಳ್ಳೆ ಕೆಲಸ ಮಾಡಿದ್ದಾನೆ ಎಂದು ಮುಂದೊಂದು ದಿನ ಜನರಿಗೆ ಅರ್ಥವಾಗುತ್ತದೆ ಎಂದರು.ಬಿಡದಿ ಟೌನ್‌ಶಿಫ್ ಯೋಜನೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಬಿಡದಿಯಲ್ಲಿ ರೈತರ ಸಭೆಯನ್ನು ನಡೆಸಿ ಅವರ ಕುಂದುಕೊರತೆಯನ್ನು ಆಲಿಸುತ್ತೇನೆ. ಸದ್ಯದಲ್ಲೇ ದಿನಾಂಕ ನಿಗದಿಮಾಡುವೆ ಎಂದರು.ಡಿ-ನೋಟಿಫಿಕೇಷನ್ ಇಲ್ಲ:

ಟೌನ್‌ಶಿಫ್‌ಗೆ ಗುರುತಿಸಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಡಿ-ನೋಟಿಫಿಕೇಷನ್ ಮಾಡುವುದಿಲ್ಲ. ಯಾರು ಏನೇ ಹೇಳಿದರೂ ಅದನ್ನು ಡಿ-ನೋಟಿಫಿಕೇಷನ್ ಮಾಡುವ ಹಕ್ಕು ಸಿದ್ದರಾಮಯ್ಯ ಅವರಿಗೂ ಇಲ್ಲ, ನನಗೂ ಇಲ್ಲ. ಈ ಯೋಜನೆ ಮಾಡಿದ್ದ ನಾನಲ್ಲ, ಕುಮಾರಸ್ವಾಮಿ. ಅ ಅಧಿಕಾರದಲ್ಲಿದ್ದಾಗ ಅವರೇ ಡಿ-ನೋಟಿಫಿಕೇಷನ್ ಮಾಡಬಹುದಿತ್ತು. ನಾನು ಮಾಡುವುದಕ್ಕೆ ತಯಾರಿಲ್ಲ. ಆದರೆ, ಭೂಮಿಕಳೆದುಕೊಳ್ಳುವ ನಮ್ಮ ಜಿಲ್ಲೆಯ ಜನತೆಗೆ ಹೆಚ್ಚಿನ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬಾಕ್ಸ್....

ಅವರು ಮಲಗಿದ್ದಾರೆ ಏಕೆ ಎದ್ದೇಳಿಸುತ್ತೀರಾಅವರು ಮಲಗಿದ್ದಾರೆ, ಅವರನ್ಯಾಕೆ ಎದ್ದೇಳಿಸುತ್ತೀರಾ, ಅವರು ರೆಸ್ಟ್ ತೆಗೆದುಕೊಳ್ಳಲಿ, ಅವರಿಗೆ ತೊಂದರೆ ಕೊಡಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದರು.ಸತ್ತೆಗಾಲ ಕುಡಿಯುವ ನೀರಿನ ಯೋಜನೆ ನಮ್ಮ ಪ್ರಾಜೆಕ್ಟ್ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಗಮನಸೆಳೆದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾವೇನು ಮಾಡಿಲ್ಲ ಬಿಡಿ, ಎಲ್ಲಾ ಅವರೇ ಮಾಡಿರೋದು ಎಂದು ಗರಂ ಆದರು.ಪೊಟೋ೫ಸಿಪಿಟಿ೨: ಚನ್ನಪಟ್ಟಣದ ತಾಪಂ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಗತಿಪರಿಶೀಲನಾ ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!