ಸುತ್ತೂರು ಜಾತ್ರೆ ಶಿವರಾತ್ರಿಶ್ವರ ರಥ ತಿಪಟೂರಿಗೆ ಆಗಮನ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಸುತ್ತೂರು ಜಾತ್ರಾ ರಥ ತುಮಕೂರು ಜಿಲ್ಲೆಯ ತಿಪಟೂರಿಗೆ ಆಗಮನ

ಕನ್ನಡಪ್ರಭ ವಾರ್ತೆ ತಿಪಟೂರು

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಅವರ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಸಂಚರಿಸುತ್ತಿರುವ ಶ್ರೀ ಶಿವರಾತ್ರೀಶ್ವರ ರಥವು ಸೋಮವಾರ ತಿಪಟೂರು ನಗರಕ್ಕೆ ಆಗಮಿಸಿದ ವೇಳೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ಸ್ವಾಗತಿಸಲಾಯಿತು.

ಈ ವೇಳೆ ಶಸಾಪ ತಾ. ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವವು ಫೆ. 6ರಿಂದ 11ರವರೆಗೆ ಸುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿದ್ದು ಸಕಲ ಭಕ್ತರನ್ನು ಆಮಂತ್ರಿಸುವ ಸಲುವಾಗಿ ರಥವು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಇಂದು ತಿಪಟೂರಿಗೆ ಆಗಮಿಸಿದೆ. ಕ್ರಿ.ಶ.1030ರ ಸುಮಾರಿನಲ್ಲಿ ಚೋಳ ದೊರೆಗಳು ಕರ್ನಾಟಕದ ಗಂಗರ ಮೇಲೆ ಯುದ್ದಕ್ಕಾಗಿ ಕಪಿಲಾ ನದಿಯ ದಂಡೆಯ ಮೇಲೆ ಬೀಡು ಬಿಟ್ಟಿರುತ್ತಾರೆ. ಆತನ ಕುದುರೆ ಕಪಿಲ ನದಿ ದಂಡೆ ಮೇಲೆ ತಪೋನಿರತ ಆದಿಗುರುಗಳನ್ನು ಸುತ್ತಿದ್ದರಿಂದ ಆ ಊರಿಗೆ ಸುತ್ತೂರು ಎಂದು ಹೆಸರು ಬಂದಿತು. ಚೋಳ ದೊರೆ ಮತ್ತು ತಲೆಕಾಡಿನ ಗಂಗರ ಮಧ್ಯೆ ಸ್ನೇಹ ಮಿಲನ ಮಾಡಿ ಯುದ್ಧ ನಡೆಯದಂತೆ ಶ್ರೀಗಳು ತಡೆದರು. ಇಂದಿಗೂ ಸಹ ಚೋಳ ದೊರೆ ಸುತ್ತೂರಿನಲ್ಲಿ ಕಟ್ಟಿಸಿರುವ ಸೋಮೇಶ್ವರ ದೇವಸ್ಥಾನವಿದೆ. ಈಗಾಗಲೆ 23 ಗುರುವರ್ಯರು ಆಗಿ ಹೋಗಿದ್ದು, ಈಗ 24ನೇ ಗುರುಗಳಾದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಶ್ರೀಮಠವನ್ನು ಯಶಶ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದು, ದಕ್ಷಿಣ ಕರ್ನಾಟಕದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ತ್ರಿವಿಧ ದಾಸೋಹಿಗಳಾಗಿ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಿರುವ ಧೀಮಂತ ಮಠ ಸುತ್ತೂರು. ಈ ಸುತ್ತೂರು ಜಾತ್ರೆಗೆ ನಾವೆಲ್ಲರೂ ಪಾಲ್ಗೊಂಡು ಸಂಪನ್ನಗೊಳಿಸೋಣ ಎಂದು ತಿಳಿಸಿದರು.

ಜಾತ್ರಾ ಪ್ರಚಾರ ಸಮಿತಿ ಸಂಚಾಲಕ ಪಂಚಾಕ್ಷರಿ ಮಾತನಾಡಿ, 40 ದಿನದ ಯಾತ್ರೆ ಇದಾಗಿದ್ದು, ಸುಮಾರು 15 ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ಮೈಸೂರು, ಮಂಡ್ಯ, ಕೋಲಾರ, ಬೆಂಗಳೂರು, ರಾಮನಗರ ಮುಗಿಸಿ ಯಾತ್ರೆ ಅರಸೀಕೆರೆಗೆ ತಲುಪಲಿದ್ದು ಭಕ್ತ ಬಂಧುಗಳು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಸಿ.ಎಸ್. ಶಂಕರಲಿಂಗಪ್ಪ, ಡಿ.ಎಸ್. ಲೋಕೇಶ್, ನಿವೃತ್ತ ಉಪನ್ಯಾಸಕ ವೀರಪ್ಪ ಅಂಗಡಿ, ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ, ವೀರಶೈವ ಸಮಾಜದ ತಾ. ಅಧ್ಯಕ್ಷ ಎಂ.ಆರ್., ಸಂಗಮೇಶ್, ವೀರಶೈವ ಸಮಾಜದ ನಿರಂಜನಮೂರ್ತಿ, ಕಸಾಪ ತಾ. ಅಧ್ಯಕ್ಷ ಎಂ. ಬಸವರಾಜಪ್ಪ, ಕಾರ್ಯದರ್ಶಿ ಮಂಜಪ್ಪ ಮತ್ತಿತರರಿದ್ದರು.

Share this article