ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸಿ: ಅಶೋಕ ಸಂಗಪ್ಪ

KannadaprabhaNewsNetwork |  
Published : Mar 27, 2026, 02:30 AM IST
ಚಿತ್ರ : 26ಎಂಡಿಕೆ4 : ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ  ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗವು ಬಹು ಭಾಷೆ ಮತ್ತು ಬಹು ಸಂಸ್ಕೃತಿಯನ್ನೊಳಗೊಂಡಿರುವ ಪ್ರದೇಶವಾಗಿದೆ. ಆ ದಿಸೆಯಲ್ಲಿ ನಾಡಿನ ಭಾಷೆ ಜೊತೆಗೆ ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗವು ಬಹು ಭಾಷೆ ಮತ್ತು ಬಹು ಸಂಸ್ಕೃತಿಯನ್ನೊಳಗೊಂಡಿರುವ ಪ್ರದೇಶವಾಗಿದೆ. ಆ ದಿಸೆಯಲ್ಲಿ ನಾಡಿನ ಭಾಷೆ ಜೊತೆಗೆ ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಇವರ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಬಹುಭಾಷೆ ಮತ್ತು ಬಹುಸಂಸ್ಕೃತಿ ಇರುವುದನ್ನು ಕಾಣಬಹುದಾಗಿದೆ. ನಾಡಿನ ಭಾಷೆಯ ಜೊತೆಗೆ ಹಲವು ಸ್ಥಳೀಯ ಭಾಷೆ ಕಾಣಬಹುದಾಗಿದೆ. ಬಹು ದೊಡ್ಡ ಭಾಷೆಯಾದ ಕನ್ನಡ ಭಾಷೆ ಜೊತೆಗೆ ಸಣ್ಣ ಸಣ್ಣ ಸ್ಥಳೀಯ ಭಾಷೆಗಳನ್ನು ಸಹ ಉಳಿಸಬೇಕು. ಆ ನಿಟ್ಟಿನಲ್ಲಿ ಅರೆಭಾಷೆಗೆ ತನ್ನದೇ ಆದ ವೈವಿದ್ಯಮಯ ಭಾಷಾ ಶ್ರೀಮಂತಿಕೆ ಇದ್ದು, ಅದನ್ನು ಉಳಿಸುವಂತಾಗಬೇಕು ಎಂದು ಹೇಳಿದರು.

ಅರೆಭಾಷೆಯನ್ನು ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಮಾತನಾಡುವ ಪ್ರದೇಶವಾಗಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ 22 ಭಾಷೆಗಳು ಇದ್ದು, ಇವುಗಳಲ್ಲಿ ಉತ್ತರ ಭಾರತದ 18 ಭಾಷೆಗಳು ಹಾಗೂ ದಕ್ಷಿಣದ ನಾಲ್ಕು ಭಾಷೆಗಳು ಸಂವಿಧಾನ 8 ನೇ ಪರಿಚ್ಚೇದದಲ್ಲಿ ಸೇರಿವೆ ಎಂದು ಪ್ರೊ. ಅಶೋಕ ಸಂಗಪ್ಪ ಆಲೂರ ತಿಳಿಸಿದರು.

ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಸಮಾಜ ಸೇವಕರಾದ ಚಂಡೀರ ಕೆ. ಬಸಪ್ಪ ಮಾತನಾಡಿ, ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಜಾನಪದ ಕಲೆಗಳನ್ನು ಉಳಿಸಬೇಕು. ಅರೆಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಪ್ರಯತ್ನಿಸಬೇಕು ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೆ. ರಾಘವ ಬಿ. ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರಗಳು ಉಳಿಯಬೇಕು. ಅರೆಭಾಷೆಯ ಉತ್ತಮ ಪುಸ್ತಕಗಳು ಇತರ ಭಾಷೆಗಳಿಗೆ ಅನುವಾದ ಆಗಬೇಕು. ಇದರಿಂದ ಭಾಷಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಸಲಹೆ ನೀಡಿದರು.

ಬರಹಗಾರರಾದ ಸುಶೀಲಾ ಕುಶಾಲಪ್ಪ ಅಂಬೆಕಲ್ಲು ಮಾತನಾಡಿ, ಅರೆಭಾಷೆ ಮಾತನಾಡುವ ನೆಲ, ಸಂಸ್ಕೃತಿ ಮತ್ತು ಗುರುತನ್ನು ಕಾಪಾಡಿಕೊಂಡು ಹೋಗಬೇಕು. ಭಾಷೆ ಕೇವಲ ಮಾತನಾಡಲು ಇರುವ ಒಂದು ಸಾಧನ ಮಾತ್ರವಲ್ಲ. ಇದು ಒಂದು ರೀತಿ ಜೀವನ ಪರಂಪರಾ ಶೈಲಿ ಇದ್ದಂತೆ ಎಂದು ಪ್ರತಿಪಾದಿಸಿದರು.

ಅರೆಭಾಷೆ ಪಾರಂಪರಿಕ ಜ್ಞಾನದ ಜಾನಪದ ಕಲೆ ಹಾಡುಗಳನ್ನು ಸಂರಕ್ಷಿಸಬೇಕಿದೆ. ಹಬ್ಬ ಹರಿದಿನಗಳು, ಮದುವೆಗಳಲ್ಲಿ ಹೇಳುವ ಜಾನಪದ ಪದಗಳು, ಸೋಬಾನೆ ಪದಗಳು, ಅರೆಭಾಷೆ ಸಂಸ್ಕೃತಿ ಔನತ್ಯಕ್ಕೆ ಕೊಂಡ್ಯೊಯುತ್ತವೆ ಎಂದು ವಿವರಿಸಿದರು. ಮೈಸೂರು ಯುವರಾಜ ಕಾಲೇಜು ಮತ್ತು ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಚೆರಿಯಮನೆ ಬೆಳ್ಯಪ್ಪ ಡಾ. ರಾಮಚಂದ್ರ ಅವರು ಅರೆಭಾಷಿಕರ ಹಬ್ಬ ಮತ್ತು ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿ, ಅರೆಭಾಷಿಕರಲ್ಲಿ ಹರಿಸೇವೆಯು ಮೂಲ ಸಂಸ್ಕೃತಿಯ ಹಬ್ಬವಾಗಿದೆ. ಗೌಡ ಸಂಸ್ಕೃತಿಯ ಪ್ರಾಚೀನತೆ, ಪ್ರಕೃತಿಯ ಆರಾಧಕರಾಗಿದ್ದಾರೆ. ಉಳಿದಂತೆ ಎಲ್ಲ ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುತ್ತಾರೆ ಎಂದರು. ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಲಾವಣ್ಯ ಸಿ.ಪಿ. ಅವರು ಅರೆಭಾಷೆಯ ನೆಲೆ ಮತ್ತು ಅದರ ಬೆಳವಣಿಗೆ ಸಾಧ್ಯತೆ ಕುರಿತು ಮಾತನಾಡಿ, ಅರೆಭಾಷೆ ಪದ್ಧತಿ, ಜಂಬರ, ಸೋಬಾನೆ ಪದ್ಯ, ಜಾನಪದ ಹಾಡು ಹೀಗೆ ಆಚಾರ-ವಿಚಾರಗಳು, ಆರಾಧನೆ, ನಂಬಿಕೆಗಳು ಅರೆಭಾಷೆಗೆ ಒಂದು ರೀತಿ ಬೆನ್ನುಲುಬು ಇದ್ದಂತೆ ಎಂದರು.

ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಗೋಪಾಲ್ ಪೇರಾಜೆ ಮಾತನಾಡಿ, ಅರೆಭಾಷೆಯ ಐತಿಹಾಸಿಕ ಹಿನ್ನೆಲೆ, ಭಾಷೆ ಉಳಿಸಿ ಬೆಳೆಸುವಲ್ಲಿ ಪದಗಳ ರಚನೆ, ಸಂರಕ್ಷಣೆ, ಜತೆಗೆ ಅರೆಭಾಷೆ ಮಾತನಾಡುವ ಎಲ್ಲ ಜನರನ್ನು ಒಟ್ಟುಗೂಡಿಸಿ, ಭಾಷೆ ಅಭಿವೃದ್ಧಿಗೆ ಅಕಾಡೆಮಿ ಶ್ರಮಿಸುತ್ತಿದೆ ಎಂದರು. ಪದಕಟ್ಟು ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಧ್ಯಾಪಕ ಸಂಜೀವ ಕುದ್ಪಾಜೆ, ಸಾಹಿತಿ ಹಾಗೂ ಕವಯತ್ರಿ ಲೀಲಾವತಿ ದಾಮೋದರ ಕುಂದಲ್ಪಾಡಿ ಪಾಲ್ಗೊಂಡಿದ್ದರು. ಅಕಾಡೆಮಿ ಸದಸ್ಯರಾದ ಸೂದನ ಎಸ್. ಈರಪ್ಪ, ಲತಾ ಪ್ರಸಾದ್ ಕುದ್ಪಾಜೆ, ಕುದ್ಪಾಜೆ ಕೆ. ಪ್ರಕಾಶ್, ವಿನೋದ್ ಮೂಡಗದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಮತ್ತಿತರರು ಇದ್ದರು. ಅಕಾಡೆಮಿ ಸದಸ್ಯರಾದ ಪೂಳಕಂಡ ಸಂದೀಪ್ ಸ್ವಾಗತಿಸಿದರು. ವರ್ಷ ಕೋಡಿಮನೆ ನಿರೂಪಿಸಿದರು. ಸಪ್ನ, ಚೊಂದಮ್ಮ, ಲಿಖಿತಾ ನಾಡಗೀತೆ ಹಾಡಿದರು, ಪೊನ್ನಚ್ಚನ ಮೋಹನ್ ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಅರೆಭಾಷೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಂಬಂಧ ‘ಅರೆಭಾಷೆ ಸಂಘ’ಗಳನ್ನು ರಚಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲೂ ಸಹ ಕಾಲೇಜುಗಳಲ್ಲಿ ಅರೆಭಾಷೆ ಸಂಘಗಳ ರಚನೆಗೆ ಕೊಡಗು ವಿಶ್ವವಿದ್ಯಾಲಯ ಸಹಕರಿಸಬೇಕು.

-ಸದಾನಂದ ಮಾವಜಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿ: ವೀಣಾ ಅಠವಾಲೆ
ಹೊಸಪೇಟೆ ನಗರಸಭೆ: 5.39 ಲಕ್ಷ ರು. ಉಳಿತಾಯ ಬಜೆಟ್