ಮೂಲ್ಕಿ: ಕಟೀಲು ದೇವಸ್ಥಾನದ ಕಲ್ಲುಬಂಡೆಯ ಎಡೆಯಲ್ಲಿ ಬರುವ ನಂದಿನಿ ನದಿಯ ಉಗಮ ಸ್ಥಾನ ಅತ್ಯಂತ ಉತ್ತಮ, ಪವಿತ್ರ ಸ್ಥಾನವಿದು. ನಂದಿನೀ ಅಂದರೆ ಗಂಗೆಯ ಮೊದಲ ಹೆಸರು. ನದಿ ಎಂದರೆ ಸಮೃದ್ದಿ ಎಂದರ್ಥ. ಕನಕಬೆಟ್ಟು, ಬಂಗಾರಗುಡ್ಡೆಯಲ್ಲಿ ಇದೆ ಎಂದರೆ ಇದು ಸಂಪತ್ತಿನ ದ್ಯೋತಕ. ಈ ನದಿಯ ಪಾವಿತ್ರ್ಯವನ್ನು ಉಳಿಸಬೇಕೆಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.
ಕನಕಬೆಟ್ಟು, ಬಂಗಾರಬೆಟ್ಟು, ಕಾಂಚನಗಿರಿ, ಕನಕಗರಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಮಿಜಾರು ಸಮೀಪದ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನು ಸೇರುತ್ತದೆ. ನದಿಯ ಉಗಮ ಸ್ಥಾನಕ್ಕೆ ಹೋಗುವುದು ಕಷ್ಟವಲ್ಲವಾದರೂ, ನಾಗಬನ, ಹುತ್ತಗಳು, ಪೊದೆಗಳು ಇರುವ ಕಾರಣ ಅನಾಯಾಸವಾಗಿ ಹೋಗಿ ಬರುವಂತಿಲ್ಲ. ಪುಟ್ಟ ಮಕ್ಕಳು, ವೃದ್ಧರು ಹೋಗುವುದು ಕಷ್ಟ. ಪುಟ್ಟದಾಗಿ ಹರಿಯುವ ತೋಡಿನಲ್ಲೇ ಹೋಗಬೇಕಾಗುತ್ತದೆ. ನೈಜ ಪರಿಸರಾಸಕ್ತರು, ಆಧ್ಯಾತ್ಮ ಮನಸಿಗರು ಮಾತ್ರ ಹೋದರೆ ಉತ್ತಮ ಎನ್ನುವಂತಹ ಪ್ರಕೃತಿಯ ಸೌಂದರ್ಯದ ತಾಣವಿದು. ನಂದಿನೀ ನದಿ ಕನಕಬೆಟ್ಟುವಿನಲ್ಲಿ ಹುಟ್ಟಿ, ಕಟೀಲು, ಶಿಬರೂರು, ಹಳೆಯಂಗಡಿ ಮೂಲಕ ಸಸಿಹಿತ್ಲುವಿನಲ್ಲಿ ಶಾಂಭವೀ ನದಿಯೊಂದಿಗೆ ಕಡಲನ್ನು ಸೇರುತ್ತದೆ. ಕನಕಬೆಟ್ಟುವಿನ ಪುಟ್ಟ ಸ್ಥಳದಲ್ಲಿ ನೀರಿನ ಒಸರು ಬರುತ್ತದೆ. ಮುಂದೆ ಹರಿಯುತ್ತ ನದಿಯಾಗಿ ಮುಂದುವರಿಯುತ್ತದೆ. ಉಗಮ ಸ್ಥಾನಕ್ಕೆ ಹೋಗಲು ದಾರಿ ಮಾಡಿಕೊಂಡು ಹೋಗಬೇಕಾಯಿತು.
ಇಲ್ಲಿ ಹುತ್ತದ ಬಳಿ ಒಂದೆಡೆ ಬಿಸಿನೀರಿನ ಬುಗ್ಗೆ ಇರುವ ಅನುಭವವೂ ಆಯಿತು. ಇಂತಹ ಪ್ರಕೃತಿ ವೈಶಿಷ್ಟ್ಯದ ನಂದಿನಿ ಎಲ್ಲರಿಗೂ ಒಳಿತನ್ನು ಮಾಡಲಿ. ಲೋಕಕ್ಕೆ ಮಳೆ, ಬೆಳೆಯನ್ನು ನೀಡಿ ಅನುಗ್ರಹಿಸಲಿ ಎಂದು ಕಟೀಲು ಭ್ರಾಮರಿಯಲ್ಲಿ ಪ್ರಾರ್ಥಿಸುತ್ತೇನೆಂದು ಕಟೀಲು ದೇವಸ್ಥಾನದ ಅರ್ಚಕ ಕಮಲಾದೇವೀಪ್ರಸಾದ ಆಸ್ರಣ್ಣ ತಿಳಿಸಿದರು. ಕಟೀಲು ದೇಗುಲದ ಅರ್ಚಕರಾದ ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಸದಾನಂದ ಆಸ್ರಣ್ಣ, ಸುಕನ್ಯಾ ಆಸ್ರಣ್ಣ, ಕನಕಬೆಟ್ಟು ನಂದಿನೀ ನದಿ ಉಗಮ ಸ್ಥಳಕ್ಕೆ ಭೇಟಿ ನೀಡಿ ಲೋಕಕ್ಕೆ ಸನ್ಮಂಗಲವಾಗಲಿ ಎಂದು ಪ್ರಾರ್ಥಿಸಿದರು. ಸ್ಥಳೀಯರಾದ ಸುಧಾಕರ ಪೂಂಜ, ರಾಮಚಂದ್ರ ಮಿಜಾರು ಮಾರ್ಗದರ್ಶನ ಮಾಡಿದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ದಾಮೋದರ ಶೆಟ್ಟಿ, ಶ್ರೀದೇವೀ ಭಜನಾ ಮಂಡಳಿಯ ಯತೀಶ್ ಶೆಟ್ಟಿ, ಕೇಶವ ಕಟೀಲು, ಪ್ರಶಾಂತ್, ಜಯಂತ್, ವಿಕೇಶ್, ಅನಿಕೇತ್, ರಸನಾ ಮತ್ತಿತರರಿದ್ದರು.