ಗುಳ್ಳಾಪುರದಲ್ಲಿ ಹಿಂದೂ ಸಮಾಜೋತ್ಸವ
ಹಿಂದೂ ಸಮಾಜಕ್ಕಾಗಿ ಋಷಿ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ಉಳಿಸಬೇಕು ಎಂದು ಸಿದ್ದಾಪುರ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿಗಳು ನುಡಿದರು.
ಅರಬೈಲ್ ಮಂಡಲದ ಗುಳ್ಳಾಪುರದಲ್ಲಿ ಶುಕ್ರವಾರ ನಡೆದ ಹಿಂದೂ ಸಮಾಜೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಜೀವನಶೈಲಿ ಜಗತ್ತಿನಲ್ಲೇ ಶ್ರೇಷ್ಠವಾದುದು. ಪಂಚ ಮಹಾಯಜ್ಞಗಳನ್ನು ವೇದಗಳು ನಮಗೆ ಬೋಧಿಸಿವೆ. ದೇವ ಯಜ್ಞ, ಪಿತೃ ಯಜ್ಞ, ಬ್ರಹ್ಮ ಯಜ್ಞ, ಮನುಷ್ಯ ಯಜ್ಞ ಮತ್ತು ಭೂತ ಯಜ್ಞ ಇಂತಹ ಮಹಾ ಯಜ್ಞಗಳ ಚಿಂತನೆ ನಮ್ಮ ಋಷಿ ಪರಂಪರೆಯಿಂದ ದೊರೆತಿದೆ ಎಂದು ಹೇಳಿದರು.ಪ್ರತಿದಿನವೂ ನಾವು ಸಮಾಜಮುಖಿ ಚಿಂತನೆಗಳನ್ನು ಮಾಡಬೇಕು. ಸಮಾಜದ ಸೇವೆ ಮಾಡಬೇಕು. ಅನ್ನ ದಾನಾದಿಗಳನ್ನು ಮಾಡಬೇಕು. ದೀನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ಭಾರತದಲ್ಲಿ ಎಂದಿಗೂ ಅನ್ನವನ್ನು ಮಾರಾಟ ಮಾಡುವ ಪದ್ಧತಿ ಇರಲಿಲ್ಲ. ಯಾವುದೇ ಊರಿನ ಯಾರದೇ ಮನೆಗೆ ಹೋದರೂ ಗೌರವದಿಂದ ಆಹಾರ ನೀಡುವ ಕ್ರಮವಿತ್ತು. ಸಮಸ್ತ ಜೀವರಾಶಿಗಳಿಗೂ ಮಾನವನು ಆಹಾರ ನೀಡಬೇಕು. ಪ್ರಾಣಿ ಪಕ್ಷಿಗಳಿಗೆ ನೀರು-ಆಹಾರ ಇಡಬೇಕು. ವೇದದ ನಿರ್ದೇಶನದಂತೆ ಪ್ರಕೃತಿಯನ್ನು ಪೂಜಿಸಬೇಕು ಎಂದು ಹೇಳಿದರು.ವಿಶಾಲ ಚಿಂತನೆಗಳಿರುವ ಧರ್ಮ ನಮ್ಮ ಸನಾತನ ಹಿಂದೂ ಧರ್ಮ. ಸಮಸ್ತ ಸೃಷ್ಟಿಯಲ್ಲಿ ಪರಮಾತ್ಮನನ್ನು ಕಾಣು ಎಂಬುದು ಹಿಂದೂ ಧರ್ಮದ ಸಾರ. ಬೇರೆ ಪಂಥಗಳಲ್ಲಿ ದೇವರ ಕಲ್ಪನೆ ಎಂದರೆ ದೇವರು ಬೇರೆ ಲೋಕದಲ್ಲಿದ್ದು, ನಮ್ಮನ್ನು ಸೃಷ್ಟಿಸಿ ಕಳಿಸಿದ್ದಾನೆ ಎಂಬುದಾಗಿದೆ. ಹಿಂದೂ ಸನಾತನ ಧರ್ಮದಲ್ಲಿ ದೇವರು ಎಲ್ಲ ಕಡೆಯೂ ಇದ್ದಾನೆ ಎಂಬುದು. ಆದ್ದರಿಂದ ನಮ್ಮ ಸನಾತನ ಧರ್ಮದ ರಕ್ಷಣೆಯ ಜತೆ ಹಿಂದೂಗಳು ಒಗ್ಗಟ್ಟಾಗಿ ಸಂಘಟಿತರಾಗದಿದ್ದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಹಿಂದುತ್ವ ಯಾರ ಸ್ವತ್ತಲ್ಲ. ಹಿಂದುತ್ವಕ್ಕೆ ಯಾವುದೇ ಪಕ್ಷ, ಜಾತಿ ಅಥವಾ ಪಂಗಡಗಳ ಭೇದ-ಭಾವವಿಲ್ಲ. ಅದು ನಮ್ಮ ಜೀವನಕ್ಕೆ ಸಂಸ್ಕಾರಗಳನ್ನು ಕಲಿಸುವ, ಸನಾತನ ಮೌಲ್ಯಗಳನ್ನು ಸಾರುವ ಒಂದು ಜೀವನ ಪದ್ಧತಿಯಾಗಿದೆ. ಕೇವಲ ಭಾಷಣದಿಂದ ಸಂಸ್ಕಾರ ಸಿಗದು. ನಮ್ಮ ಆಚರಣೆಯಲ್ಲಿ ಇರಬೇಕು ಎಂದರು.