ಅಕ್ಷರಗಳನ್ನೇ ಪೋಣಿಸಿ ಹೂ ಮಾಲೆ ಮಾಡಿದ ಸಾವಿತ್ರಿಬಾಯಿ

KannadaprabhaNewsNetwork |  
Published : Jan 06, 2025, 01:02 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಬಿ.ಪಿ ತಿಪ್ಪೇಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹೂ ಬೆಳೆಯುವ ಮಾಲಿ ಸಮುದಾಯದ ಸಾವಿತ್ರಿಬಾಯಿ ಅಕ್ಷರಗಳನ್ನೇ ಪೋಣಿಸಿ ಹೂಮಾಲೆ ಮಾಡಿದಾಕೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಿಯಿರಿ ವಿದ್ಯೆ ಕಲಿಯಿರಿ, ಮನುವನ್ನು ಕೇಳದಿರಿ, ಯಾರೂ ಹಿಂದುಳಿಯದಿರಿ, ವಿದ್ಯೆ ಕಲಿಯೋಣ ಬನ್ನಿ ಜ್ಞಾನ ಪಡೆಯೋಣ, ಎಲ್ಲರೂ ಕೂಡಿ ಕಲಿಯೋಣ ಬನ್ನಿ ಎಂದು ಸಾವಿತ್ರಿಬಾಯಿ ಅವರಿಂದ ಮರಾಠಿ ಭಾಷೆಯ ಪ್ರಥಮ ಬಂಡಾಯ ಕಾವ್ಯ ಪುಣೆಯ ಓಣಿ ಓಣಿಗಳಲ್ಲಿ ಮೊಳಗಿತು. ಪುಣೆಯ ಬಾಲಿಕಾ ಶಾಲೆಯಲ್ಲಿ ಪಾಠ ಮಾಡುತ್ತಾ ಅಕ್ಷರ ದೀಪವನ್ನು ಬೆಳಗುತ್ತಾ ಭಾರತದ ಮೊದಲಶಿಕ್ಷಕಿಯಾಗಿ ಅಕ್ಷರಕ್ರಾಂತಿಗೆ ಕಾರಣರಾದರು ಎಂದರು.

ಹುಡುಗಿಯರಿಗಾಗಿ, ಶೂದ್ರರಿಗಾಗಿ ತೆರೆದ ಶಾಲೆಗಳನ್ನು ನಿಲ್ಲಿಸುವುದಕ್ಕಾಗಿ ಸಂಪ್ರದಾಯಸ್ಥ ಸನಾತನಿಗಳು ಪ್ರಬಲ ತಡೆಯೊಡ್ಡುತ್ತಾರೆ. ಮೊದಲ ಹುಡುಗಿಯರ ಶಾಲೆಗೆ ಜಾಗ ಕೊಟ್ಟ ಚಿತ್ಪಾವಣ ಬ್ರಾಹ್ಮಣ ತಾತ್ಯಾಸಾಹೇಬ್ ಭಿಡೆ ಅವರಿಗೆ ಜೀವಬೆದರಿಕೆ ಒಡ್ಡಲಾಗುತ್ತದೆ. ಭಿಡೆಯವರು ಈ ಬೆದರಿಕೆಗೆ ಹೆದರದೆ ದೃಢವಾಗಿ ನಿಲ್ಲುತ್ತಾರೆ. ಸಾವಿತ್ರಿಬಾಯಿ ಶಾಲೆಗೆ ಪಾಠಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಸೆಗಣಿ ಎಸೆಯುವುದು, ಕಲ್ಲು ತೂರುವುದು ಮಾಡುತ್ತಾರೆ ಇದನ್ನು ಅರಿತ ಜ್ಯೋತಿಬಾ ಅವರ ಕ್ರಾಂತಿಗುರು ಲಾಹೂಜಿ ಸಾಳ್ವೆ ತಮ್ಮ ಗರಡಿಮನೆಯ ನಾಲ್ಕು ಪೈಲ್ವಾನರನ್ನು ಸಾವಿತ್ರಿಬಾಯಿಗೆ ಅಂಗರಕ್ಷಕರಾಗಿ ನೇಮಿಸುತ್ತಾರೆ ಎಂದು ವಿವರಿಸಿದರು.

ಹೀಗೆ ಆರಂಭವಾದ ಶಾಲೆಗಳ ಚಳವಳಿಯ ಪರಿಣಾಮ ಕೇವಲ 14 ವರ್ಷದಲ್ಲಿ 18 ಶಾಲೆಗಳನ್ನು ತೆರೆದು ಒಂದು ಶಿಕ್ಷಣ ಕ್ರಾಂತಿಯನ್ನೆ ಮಾಡುತ್ತಾರೆ. ಸಾವಿತ್ರಿಬಾಯಿ ಶಿಕ್ಷಣದ ಜೊತೆ ಜೊತೆಗೆ ಸಂಘಟನೆಯನ್ನು ಕಟ್ಟುತ್ತಾರೆ. ಜನವರಿ.14 ರ 1852 ರಲ್ಲಿ ಪುಣೆಯಲ್ಲಿ ಮಹಿಳಾ ಸೇವಾ ಸಂಘ ಸ್ಥಾಪಿಸುತ್ತಾರೆ. ಎಲ್ಲಾ ಜಾತಿ ಧರ್ಮದ ಮಹಿಳೆಯರು ಜಾತಿ ಧರ್ಮದ ಗಡಿದಾಟಿ ಒಂದಾಗಿಸಿ ಮಹಿಳಾ ಶಕ್ತಿಯನ್ನು ಏಕೀಕರಣ ಮಾಡುವ ಕನಸೊತ್ತಿದ್ದರು. ಈ ಸಂದರ್ಭದಲ್ಲಿ ಅರಿಶಿನ ಕುಂಕುಮ ಎನ್ನುವ ಆಚರಣೆಯನ್ನು ಮುನ್ನಲೆಗೆ ತಂದರು ಎಂದು ತಿಪ್ಪೇಸ್ವಾಮಿ ಹೇಳಿದರು.

ಜ್ಯೋತಿಬಾ ಅವರ ಸಾರ್ವತ್ರಿಕ ಶಿಕ್ಷಣ ಕನಸಿಗೆ ಕ್ರಿಸ್ಚಿಯನ್ ಮತಧರ್ಮ ಪ್ರಚಾರಕ ರೆವರೆಂಡ್ ಲಿಂಜಿಟ್ ಸಾಹೇಬ್, ಮುಸ್ಲಿಂ ಮದರಸಾದ ಶಿಕ್ಷಕ ಗಫೂರ್ ಬೇಗ್ ಮುನ್ಷಿ, ಜೋತಿಬಾ ಸಹಪಾಟಿಗಳಾದ ಬ್ರಾಹ್ಮಣರಾದ ಸದಾಶಿವ ಬಲ್ಲಾಳ್ ಗೋವಂಡೆ, ಮೋರೆ ವಿಠ್ಠಲ್ ವಾಳ್ ವಲ್ ಕರ್, ಸಖಾರಾಮ ಯಶವಂತ್ ಪರಾಂಜಪೆ, ತಾತ್ಯಾ ಸಾಹೇಬ್ ಭಿಡೆ ಮೊದಲಾದವರು ಜೋತಿಬಾ ಬೆಂಗಾವಲಾಗಿ ನಿಂತಿದ್ದರು ಎಂದು ತಿಪ್ಪೇಸ್ವಾಮಿ ಹೇಳಿದರು.

ಸಮತಾ ಸೇವಾ ಸಮಿತಿ ಅಧ್ಯಕ್ಷ ಪಿಲ್ಲಳ್ಳಿ ಹರೀಶ್, ಬಿಎಸ್‌ಐ ಜಿಲ್ಲಾ ಕಾರ್ಯದರ್ಶಿ ನನಿವಾಳ ರವಿಕುಮಾರ್, ಉಪನ್ಯಾಸಕ ಈ.ನಾಗೇಂದ್ರಪ್ಪ, ದ್ರಾಕ್ಷಾಯಿಣಿ, ಗಿರಿಜಾ, ತಿಪ್ಪಮ್ಮ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನಿಕೋಡ್ ರಮೇಶ್ ಇತರರಿದ್ದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!