ಕನ್ನಡಪ್ರಭ ವಾರ್ತೆ ಹಾಸನ
ನಾವು ಮಂಜೂರಾತಿಗಳಿಗೆ ಸಂಬಂಧಿಸಿದ ದಾಖಲಾತಿಗಳ ಪ್ರತಿಗಳನ್ನು ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರೂ ’ದಾಖಲಾತಿಗಳೂ ಲಭ್ಯವಿಲ್ಲ’ ಎಂದು ಹಿಂಬರಹ ನೀಡಿರುತ್ತಾರೆ. ಸಾವಂತನಹಳ್ಳಿ ಗೋಮಾಳದ ಜಮೀನನ್ನು ಕಾನೂನುಬಾಹಿರವಾಗಿ ಅರ್ಹರಲ್ಲದವರಿಗೆ ಮಂಜೂರು ಮಾಡಿರುವುದಾಗಿ ಆದೇಶವನ್ನು ಮಾಡಿದ್ದು, ಇದರಿಂದ ಸುಮಾರು ೪೦ ವರ್ಷಗಳಿಂದ ಅನುಭೋಗದಲ್ಲಿರುವ ಗ್ರಾಮಸ್ಥರಿಗೆ ಅನ್ಯಾಯವಾಗಿರುತ್ತದೆ. ಈ ಕಾನೂನುಬಾಹಿರ ಆದೇಶದಿಂದ ಕಂದಾಯ ಅಧಿಕಾರಿಗಳು ಅನುಭೋಗದಲ್ಲಿ ಇರುವವರನ್ನೂ ಸ್ವತ್ತಿನಿಂದ ಹೊರಹಾಕಲು ಮುಂದಾಗಿದ್ದು, ಗ್ರಾಮಸ್ಥರು ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿಯನ್ನು ನೀಡಿರುತ್ತಾರೆ. ಅನುಭೋಗದಲ್ಲಿರುವ ಗ್ರಾಮಸ್ಥರು ಮಂಜೂರಾತಿ ಕೋರಿ ನಮೂನೆ ೫೭ನ್ನು ಕೂಡ ಸಲ್ಲಿಸಿರುತ್ತಾರೆ. ಹಲವಾರು ಬಾರಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಸನ ಇವರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಕೂಡ ನೀಡಿರುತ್ತಾರೆ ಎಂದು ವಿವರಿಸಿದರು. ಪರಿಸ್ಥಿತಿ ಹೀಗಿರುವಾಗ ಹಾಸನದ ಅರಣ್ಯ ಇಲಾಖಾ ಅಧಿಕಾರಿಗಳು ಆಗಸ್ಟ್ 1ರಂದು ಈ ಜಮೀನಿನಲ್ಲಿ ದನಕರುಗಳ ಮೇವಿಗೆಂದು ಬೆಳೆದಿದ್ದ ಜೋಳ ಹಾಗೂ ಇತರೆ ಬೆಳೆಗಳನ್ನು ಜೆಸಿಬಿ ಮೂಲಕ ನಾಶ ಮಾಡಿರುತ್ತಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಬೆಳೆದಿರುವ ಮೇವನ್ನು ಕಟಾವು ಮಾಡಿಕೊಳ್ಳಲು ಅವಕಾಶವನ್ನು ನೀಡುವಂತೆ ಕೋರಿಕೊಂಡರೂ ಕೂಡ ಯಾವುದಕ್ಕೂ ಕಿವಿಗೊಡದೆ ಸರ್ವಾಧಿಕಾರಿಗಳಂತೆ ವರ್ತಿಸಿ ಜೊತೆಯಲ್ಲಿ ಕರೆದುಕೊಂಡು ಬಂದಿದ್ದ ಆರಕ್ಷಕರ ದಬ್ಬಾಳಿಕೆಯಿಂದ ಹಾಗೂ ಬಲಪ್ರಯೋಗದಿಂದ ಬೆಳೆದಿದ್ದ ಬೆಳೆಯನ್ನು ಕೆಲವೇ ನಿಮಿಷದಲ್ಲಿ ನಾಶಗೊಳಿಸಿ ಅಪಾರ ಹಾನಿಮಾಡಿರುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖಾ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ಈ ರೀತ್ಯ ಕ್ರಮಕೈಗೊಳ್ಳುತ್ತಿರುವುದಾಗಿ ವಿಚಾರಿಸಿದ್ದಕ್ಕೆ ಗೋಮಾಳದ ಜಮೀನು ಅರಣ್ಯ ಇಲಾಖೆಗೆ ಹಸ್ತಾಂತರವಾಗಿದ್ದು, ಅರಣ್ಯವನ್ನು ಬೆಳೆಸಲು ಸಸಿಗಳನ್ನು ನೆಡಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ತೀವ್ರ ಆಶ್ಚರ್ಯವಾಗಿದ್ದು, ಗೋಮಾಳದ ಜಮೀನನ್ನು ಕಾನೂನು ಬಾಹಿರವಾಗಿ ಅರಣ್ಯ ಇಲಾಖೆಗೆ ನೀಡಿರುವುದು ತಿಳಿದು ಬಂದಿರುತ್ತದೆ. ನ್ಯಾಯಾಲಯಲ್ಲಿರುವ ಕೇಸು ಅಂತಿಮವಾಗಿ ತೀರ್ಮಾನವಾಗುವವರೆಗೂ ಹಾಗೂ ಗೋಮಾಳದ ಸಂರಕ್ಷಣೆಗಾಗಿ ಗ್ರಾಮಸ್ಥರು ನೆಡೆಸಿರುವ ಹೋರಾಟವು ತಾರ್ಕಿಕ ಅಂತ್ಯ ಕಾಣುವವರೆಗೂ ಅನುಭೋಗದಲ್ಲಿರುವ ಗೋಮಾಳದ ಜಮೀನಿನಿಂದ ತರೆವುಗೊಳಿಸಲು ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿ ಗ್ರಾಮಸ್ಥರ ಹಿತವನ್ನು ರಕ್ಷಿಸಿ ನ್ಯಾಯವನ್ನು ದೊರಕಿಸಿಕೊಡಬೇಕಾಗಿ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಾವಂತನಹಳ್ಳಿ ಗ್ರಾಮದ ಪ್ರಕಾಶ್, ಪುಟ್ಟಶೆಟ್ಟಿ, ಮಂಜುನಾಥ್, ವೆಂಕಟೇಶ್, ದೊಡ್ಡಯ್ಯ, ವಿರುಪಾಕ್ಷ, ರಂಗಯ್ಯ, ವಿಜಯಕುಮಾರ್, ಜಗದೀಶ್, ಪ್ರಶಾಂತ್ ಕುಮಾರ್, ಮಂಜೇಗೌಡ, ತಿಮ್ಮೇಗೌಡ ಇತರರು ಇದ್ದರು.