- ಬ್ಯಾಂಕ್ ಗ್ರಾಹಕರ ಹಿತರಕ್ಷಣಾ ಸಮಿತಿ ಪ್ರತಿಭಟನೆಯಲ್ಲಿ ಜೆ.ಕಲೀಂ ಬಾಷಾ ಒತ್ತಾಯ
- - - - ಚಿಕ್ಕ ಕಟ್ಟಡಕ್ಕೆ ಬ್ಯಾಂಕ್ ವರ್ಗಾಯಿಸಿ ಗ್ರಾಹಕ ವಿರೋಧಿ ನೀತಿ ಪಾಲನೆ: ಆರೋಪ- ಹೆಚ್ಚಿನ ಗ್ರಾಹಕರ ಹೊಂದಿರುವ ಬ್ಯಾಂಕ್ ಸಮರ್ಪಕ ಸೇವೆಗೆ ನೂತನ ಶಾಖೆ ಆರಂಭಿಸಬೇಕು
- - - ಕನ್ನಡಪ್ರಭ ವಾರ್ತೆ ಹರಿಹರನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ೨ನೇ ಶಾಖೆ ಆರಂಭಿಸಲು ಆಗ್ರಹಿಸಿ ಬ್ಯಾಂಕ್ ಗ್ರಾಹಕರ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ನೀಡಲಾಯಿತು.
ಸಮಿತಿ ಪದಾಧಿಕಾರಿ ಜೆ.ಕಲೀಂ ಬಾಷಾ ಮಾತನಾಡಿ, ಈ ಹಿಂದೆ ಸ್ಟೇಟ್ ಬ್ಯಾಂಕ್ ಮೈಸೂರು ಶಾಖೆ ಎಸ್‌ಬಿಐ ಜೊತೆ ವಿಲೀನವಾಯಿತು. ಎರಡೂ ಬ್ಯಾಂಕುಗಳಲ್ಲಿ ಹಿಂದಿನಿಂದಲೂ ಗ್ರಾಹಕರ ಸಂಖ್ಯೆ ಅಧಿಕವಾಗಿತ್ತು. ಈ ಎರಡೂ ಬ್ಯಾಂಕುಗಳ ವಿಲೀನದ ನಂತರ ಎಸ್‌ಬಿಐ ಮುಂಚೆ ಇದ್ದ ವಿಸ್ತಾರವಾದ ಕಟ್ಟಡದಿಂದ ಚಿಕ್ಕ ಕಟ್ಟಡಕ್ಕೆ ವರ್ಗಾವಣೆಯಾಯಿತು. ಜೊತೆಗೆ ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಲಾಯಿತು. ಎರಡು ಬ್ಯಾಂಕುಗಳು ವಿಲೀನಗೊಂಡಾಗ ವಿಸ್ತಾರವಾದ ಕಟ್ಟಡಕ್ಕೆ ವರ್ಗಾವಣೆಯಾಗಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವುದು ಸಹಜ. ಆದರೆ, ಬ್ಯಾಂಕಿನ ಆಡಳಿತ ಮಂಡಳಿಯವರು ಇಲ್ಲಿ ಗ್ರಾಹಕ ವಿರೋಧಿ ನಿಲುವು ತಳೆದಿದ್ದಾರೆ ಎಂದು ಹೇಳಿದರು.ಈ ಶಾಖೆಯಲ್ಲೀಗ ಅಂದಾಜು ೫ ಸಾವಿರ ಗ್ರಾಹಕರ ಸಂಖ್ಯೆ ಇದೆ. ಆದರೆ ಬ್ಯಾಂಕಿನ ಕಟ್ಟಡ ಕಿಷ್ಕಿಂದೆ ಆಗಿದೆ. ಸಿಬ್ಬಂದಿ ಕಡಿಮೆ ಇರುವುದರಿಂದ ಬ್ಯಾಂಕಿನ ಗ್ರಾಹಕರಿಗೆ ಸಕಾಲಕ್ಕೆ ತ್ವರಿತ ಹಾಗೂ ಸೂಕ್ತ ಸೇವೆ ಸಿಗುತ್ತಿಲ್ಲ. ಇದು ಸೇವಾ ನ್ಯೂನತೆ ಬಿಂಬಿಸುತ್ತದೆ. ವ್ಯಾಪಾರಿಗಳು, ರೈತರು, ಸರ್ಕಾರಿ ಮತ್ತು ಖಾಸಗಿ ನೌಕರರು, ನಿವೃತ್ತ ನೌಕರರು ಅಪಾರ ಸಂಖ್ಯೆಯಲ್ಲಿ ಖಾತೆಯನ್ನು ಹೊಂದಿದ್ದಾರೆ. ಹರಿಹರ ನಗರದ ಜೊತೆಗೆ ಪಕ್ಕದ ಹರಪನಹಳ್ಳಿ, ರಾಣೇಬೆನ್ನೂರು ತಾಲೂಕಿನ ಹತ್ತಾರು ಗ್ರಾಮಗಳ ಜನರೂ ಇಲ್ಲಿ ಖಾತೆ ಹೊಂದಿದ್ದಾರೆ ಎಂದರು.
ಹೂವಿನಹಡಗಲಿಯಂತಹ ಪಟ್ಟಣದಲ್ಲಿ ಈ ಬ್ಯಾಂಕಿನ ಎರಡು ಶಾಖೆಗಳಿವೆ. ಜಿಲ್ಲೆಯ ೨ನೇ ದೊಡ್ಡ ನಗರವಾದ ಹರಿಹರದ ಗ್ರಾಹಕರಿಗೆ ಸೂಕ್ತ ಸೇವೆ ನೀಡುವ ಸಲುವಾಗಿ ಸಂಸ್ಥೆ ಶೀಘ್ರವಾಗಿ ಇನ್ನೊಂದು ಶಾಖೆ ತೆರೆಯುವಂತೆ ಆಗ್ರಹಿಸಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜೆ.ಮರುಗೇಶಪ್ಪ, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಕರ್ನಾಟಕ ರಕ್ಷಣಾ ವೇದಿಕೆ, ಮುಖಂಡರಾದ ರಮೇಶ್ ಮಾನೆ, ಮೊಹ್ಮದ್ ಇಲಿಯಾಸ್ ಬಡೇಘರ್, ಪ್ರೀತಮ್ ಬಾಬು, ಜೈ ಕರುನಾಡು ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕೊಡ್ಲಿ, ಬಿ.ಕೆ. ಅನ್ವರ್ ಬಾಷಾ, ಸೈಯದ್ ಅಹ್ಮದ್, ಸೈಯದ್ ರಿಯಾಜ್, ಐರಣಿ ಹನುಮಂತಪ್ಪ, ಕೆ.ಸಿ.ಪಟೇಲ್, ಟಿ.ಸಿ.ಉಸ್ಮಾನ್ ಅಲಿ, ಮುಕ್ತಮ್ ಬಾಷಾ, ಗೋವಿಂದರಾಜ್ ಇದ್ದರು.
- - - -೨೮ಎಚ್‌ಆರ್‌ಆರ್೨:ಹರಿಹರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ೨ನೇ ಶಾಖೆ ಆರಂಭಿಸಲು ಆಗ್ರಹಿಸಿ ಬ್ಯಾಂಕ್ ಗ್ರಾಹಕರ ಹಿತ ರಕ್ಷಣಾ ಸಮಿತಿಯಿಂದ ಶುಕ್ರವಾರ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ನೀಡಲಾಯಿತು.