ದೆಹಲಿ ಮದ್ಯ ಹಗರಣ: 5 ತಿಂಗಳ ಬಳಿಕ ಕವಿತಾಗೆ ಜಾಮೀನು

KannadaprabhaNewsNetwork | Published : Aug 28, 2024 12:48 AM

ಸಾರಾಂಶ

ದೆಹಲಿ ಮದ್ಯದಂಗಡಿ ಲೈಸೆನ್ಸ್‌ ಹಂಚಿಕೆ ಹಗರಣ ಸಂಬಂಧ ಕಳೆದ 5 ತಿಂಗಳಿನಿಂದ ಬಂಧನಕ್ಕೆ ಒಳಗಾಗಿದ್ದ ತೆಲಂಗಾಣದ ಬಿಆರ್‌ಎಸ್‌ ಪಕ್ಷದ ಶಾಸಕಿ ಕೆ.ಕವಿತಾಗೆ ಸುಪ್ರೀಂಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

ಪಿಟಿಐ ನವದೆಹಲಿ

ದೆಹಲಿ ಮದ್ಯದಂಗಡಿ ಲೈಸೆನ್ಸ್‌ ಹಂಚಿಕೆ ಹಗರಣ ಸಂಬಂಧ ಕಳೆದ 5 ತಿಂಗಳಿನಿಂದ ಬಂಧನಕ್ಕೆ ಒಳಗಾಗಿದ್ದ ತೆಲಂಗಾಣದ ಬಿಆರ್‌ಎಸ್‌ ಪಕ್ಷದ ಶಾಸಕಿ ಕೆ.ಕವಿತಾಗೆ ಸುಪ್ರೀಂಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

‘ಕವಿತಾ 5 ತಿಂಗಳಿನಿಂದ ಸಿಬಿಐ ಮತ್ತು ಇ.ಡಿ. (ಜಾರಿ ನಿರ್ದೇನಾಲಯ) ವಶದಲ್ಲಿದ್ದಾರೆ. ಈ ಪ್ರಕರಣದಲ್ಲಿ ಎರಡೂ ತನಿಖಾ ಸಂಸ್ಥೆಗಳು ಆರೋಪಿಯ ವಿಚಾರಣೆ ಮುಗಿಸಿವೆ. ಪ್ರಕರಣದ ವಿಚಾರಣೆ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಇಲ್ಲ. ಮೇಲಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಿಳೆಯರಿಗೆ ಕೆಲವೊಂದು ವಿನಾಯ್ತಿ ಇದೆ. ಅವರು ಜಾಮೀನಿಗೆ ಅರ್ಹರಾಗಿದ್ದಾರೆ. ಹೀಗಾಗಿ ಇನ್ನೂ ಆಕೆಯನ್ನು ವಶದಲ್ಲಿಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ಹೇಳಿ ದ್ವಿಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ.

ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲಾ 10 ಲಕ್ಷ ರು.ಮೌಲ್ಯದ ಎರಡು ಬಾಂಡ್‌ಗಳನ್ನು ಶ್ಯೂರಿಟಿಯಾಗಿ ಸಲ್ಲಿಸುವಂತೆ ಸೂಚಿಸಿದ ನ್ಯಾ.ಬಿ.ಆರ್‌. ಗವಾಯ್‌ ಮತ್ತು ನ್ಯಾ. ಕೆ.ವಿ.ವಿಶ್ವನಾಥನ್‌ ಅವರನ್ನೊಳಗೊಂಡ ನ್ಯಾಯಪೀಠ, ಪಾಸ್ಪೊರ್ಟ್‌ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮತ್ತು ಸಾಕ್ಷ್ಯನಾಶದ ಪ್ರಯತ್ನ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಸೂಚಿಸಿತು.

ತನಿಖೆ ಬಗ್ಗೆ ಸುಪ್ರೀ ಕಿಡಿ:

ಇದೇ ವೇಳೆ ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳ ನ್ಯಾಯಸಮ್ಮತ ನಡೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ ನ್ಯಾಯಾಲಯ, ನೀವು ಬೇಕಾದ್ದನ್ನು ಮಾತ್ರ ಆಯ್ದುಕೊಳ್ಳುವ ನೀತಿ ಅನುಸರಿಸುತ್ತಿದ್ದೀರಿ ಎಂದು ಕಿಡಿಕಾರಿತು.

ವಿಚಾರಣೆ ವೇಳೆ ತನಿಖಾ ಸಂಸ್ಥೆಯ ಪರ ವಕೀಲರು, ಕವಿತಾ ತಮ್ಮ ಫೋನ್‌ನಲ್ಲಿದ್ದ ಮಾಹಿತಿ ಅಳಿಸಿಹಾಕುವ ಮೂಲಕ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ಕೋರಿದರಾದರೂ, ಅದನ್ನು ಒಪ್ಪದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

ಕಳೆದ ಜು.1ರಂದು ದೆಹಲಿ ಹೈಕೋರ್ಟ್‌ಗೆ ಜಾಮೀನು ನಿರಾಕರಿಸಿತ್ತು. ಈ ನಿರಾಕರಣೆ ವೇಳೆ ಇಡಿ ಹಗರಣದ ಕ್ರಿಮಿನಲ್‌ ಸಂಚಿನಲ್ಲಿ ಕವಿತಾ ಪ್ರಮುಖ ಆರೋಪಿಯೆಂದು ಕಂಡುಬರುತ್ತಿದೆ ಎಂದು ಹೇಳಿತ್ತು.

ಇತ್ತೀಚಿನ ದಿನಗಳಲ್ಲಿ ಹೈಕೋರ್ಟ್‌ಗಳು ಜಾಮೀನು ನಿರಾಕರಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಜಾಮೀನು ನೀಡಿದ 3ನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ದೆಹಲಿಯ ಆಪ್‌ ನಾಯಕ ಮನೀಶ್‌ ಸಿಸೋಡಿಯಾ, ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ಗೂ ಸುಪ್ರೀಂಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಏನಿದು ಪ್ರಕರಣ?:

ದೆಹಲಿಯ ಆಮ್‌ಆದ್ಮಿ ಸರ್ಕಾರ, ರಾಜಧಾನಿಯಲ್ಲಿ ಮದ್ಯದಂಗಡಿ ಲೈಸೆನ್ಸ್‌ ಹಂಚಿಕೆ ಸಂಬಂಧ ಹೊಸ ನೀತಿ ರೂಪಿಸಿತ್ತು. ಈ ವೇಳ ಕವಿತಾ ಸೌತ್‌ ಗ್ರೂಪ್‌ ಹೆಸರಿನಲ್ಲಿ ಗುಂಪು ರೂಪಿಸಿಕೊಂಡು ದೆಹಲಿಯ ಆಪ್‌ ನಾಯಕರಿಗೆ ನೂರಾರು ಕೋಟಿ ಲಂಚ ನೀಡಿ ತಮಗೆ ಬೇಕಾದವರಿಗೆ ಹಲವು ಮದ್ಯದಂಗಡಿ ಲೈಸೆನ್ಸ್‌ ಕೊಡಿಸಿದ್ದರು ಎಂಬ ಆರೋಪವಿದೆ.

Share this article