ಕನ್ನಡಪ್ರಭ ವಾರ್ತೆ ಕುಶಾಲನಗರ
ಈ ಪ್ರಕರಣದ ಹಿನ್ನೆಲೆಯಲ್ಲಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಎರಡು ಕಾರು, 17 ಮೊಬೈಲ್, ಒಂದು ಟ್ಯಾಬ್ ಒಂದು ಲ್ಯಾಪ್‌ಟಾಪ್ ಹಾಗೂ 24,800 ರು. ನಗದು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.
ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಕುಶಾಲನಗರದ ಮಡಿಕೇರಿ ರಸ್ತೆಯಲ್ಲಿರುವ ಲಾಡ್ಜ್ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ ಆರೋಪಿಗಳು 3 ಲಕ್ಷ ರು.ಗೂ ಹೆಚ್ಚು ಹಣ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಜನ ಆರೋಪಿಗಳನ್ನು ಬೆಂಗಳೂರಿಗೆ ತೆರಳಿ ಬಂಧಿಸಲಾಗಿದೆ.
ಅಂತರ್ಜಾಲ ಮೂಲಕ ಮಹಿಳೆಯರಿಂದ ಸೆಕ್ಸ್ ಮಸಾಜ್ ವೇಶ್ಯಾವಾಟಿಕೆ ಸೇವೆಗಳು ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆ ನೀಡಿ ಕರೆ ಮಾಡುವಂತೆ ಸೃಷ್ಟಿಸಿರುವ ವೆಬ್‌ಸೈಟ್ ಮೂಲಕ ಅಮಾಯಕನನ್ನು ವಂಚನೆಗೆ ಒಳಗಾಗುವಂತೆ ಮಾಡುವ ಜಾಲ ಇದಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸ್ಥಳಿಯ ಪೊಲೀಸ್ ಅಪರಾಧ ಪತ್ತೆ ತಂಡದ ಮೂಲಕ ವಂಚಕರನ್ನು ಪತ್ತೆ ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಮರಾಜನ್ ತಿಳಿಸಿದರು.
ಪ್ರಕರಣದ ಬೆನ್ನು ಬಿದ್ದ ಪೊಲೀಸ್ ಕಾರ್ಯಾಚರಣೆ ತಂಡ ಕುಶಾಲನಗರ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ, ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಠಾಣಾಧಿಕಾರಿಗಳಾದ ಎಚ್ ವಿ ಚಂದ್ರಶೇಖರ್, ಎಚ್.ಟಿ.ಗೀತಾ ಮತ್ತು ಸಿಬ್ಬಂದಿ ವಿಶೇಷ ತಂಡ ರಚಿಸಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷಾಧಾರಗಳನ್ನು ಕಲೆಹಾಕಿ ತನಿಖೆ ಕೈಗೊಂಡು ಆರೋಪಿಗಳು ಮತ್ತು ಅವರು ಬಳಸುತ್ತಿದ್ದ ಕಾರು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಂಜಿತ್ ,ಬಾಬು, ಉದಯ್ ಮತ್ತಿತರರು ಪಾಲ್ಗೊಂಡಿದ್ದರು.