ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಡ್ರಗ್ ಫ್ರೀ ಕ್ಯಾಂಪಸ್ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಡ್ರಗ್ ಫ್ರೀ ಕ್ಯಾಂಪಸ್ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಕೇಂದ್ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಪ್ರಿಲ್ ನಲ್ಲಿ ನಡೆದ ಜಿಲ್ಲಾ ಮಟ್ಟದ ದ್ರವ್ಯ ಸಮನ್ವಯ ಕೇಂದ್ರ ಸಭೆಯ ನಡಾವಳಿಯ ಅಂಶಗಳಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ, ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಇಲ್ಲಿಯವರೆಗೂ 186 ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ ಎಂದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಠಾಣಾ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಟ ಮಾಡುವುದರಿಂದಾಗುವ ದುಷ್ಪರಿಣಾಮಗಳ ಹಾಗೂ ಕಾನೂನು ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಜಾಗೃತಿ ಕಾರ್ಯಕ್ರಮಗಳು, ಬೀದಿ ನಾಟಕ ಮತ್ತು ಮ್ಯಾರಥಾನ್ ಜಾಥ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿರುವ ಪುನರಾವರ್ತಿತ ಪೆಡ್ಲರ್‌ಗಳ ಮೇಲೆ ಠಾಣಾ ವ್ಯಾಪ್ತಿಯಲ್ಲಿ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ ವ್ಯಸನ ಮುಕ್ತರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಪುನರ್ವಸತಿ ಕೇಂದ್ರದ ಅಗತ್ಯ ಇದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಅಥವಾ ಸರ್ಕಾರಿ ಪುನರ್ವಸತಿ ಕೇಂದ್ರ ಹಾಗೂ ಸರ್ಕಾರಿ ಕಟ್ಟಡ ದೊರೆತಲ್ಲಿ ಪುನರ್ವಸತಿ ಕೇಂದ್ರ ತೆರೆಯಬಹುದು ಎಂದರು.ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಎಲ್ಲ ಜಿಲ್ಲೆಗಳಲ್ಲಿ ಪುನರ್ವಸತಿ ಕೇಂದ್ರಗಳಿವೆ. ಜಿಲ್ಲೆಯಲ್ಲೂ ಅಗತ್ಯ ಇರುವುದರಿಂದ ಅನುದಾನ ಕಲ್ಪಿಸಲಾಗುವುದು. ಕೇಂದ್ರ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.ಮಾದಕ ವಸ್ತುಗಳ ಸೇವನೆಗೆ ಒಳಪಟ್ಟ ವ್ಯಕ್ತಿಗಳನ್ನು ದುಶ್ಚಟದಿಂದ ವಿಮುಕ್ತಿಗೊಳಿಸುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯಲ್ಲಿ ತಾತ್ಕಾಲಿಕ ಸ್ಥಾಪಿತಗೊಂಡಿರುವ ವ್ಯಸನಮುಕ್ತ ಕೇಂದ್ರಕ್ಕೆ ನಿಯೋಜಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿವರವನ್ನು ಪೊಲೀಸ್ ಇಲಾಖೆಗೆ ಸಲ್ಲಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಈಗಾಗಲೇ ಗುರುತಿಸಲ್ಪಟ್ಟಿರುವ ಮಾದಕ ವ್ಯಸನಿಗಳನ್ನು ಸಂಬಂಧಿತ ವ್ಯಸನಮುಕ್ತ ಕೇಂದ್ರಕ್ಕೆ ಹಾಜರುಪಡಿಸಿ, ಅವರಿಗೆ ನಿಯಮಿತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ, ಪ್ರವಾಸೋದ್ಯಮ, ಕಂದಾಯ ಮತ್ತು ಪೊಲೀಸ್ ಇಲಾಖೆಯವರು ಜಂಟಿಯಾಗಿ ಜಿಲ್ಲೆಯಲ್ಲಿರುವ ಹೋಂಸ್ಟೇ, ರೆಸಾರ್ಟ್, ಹೊಟೇಲ್‌ಗಳಲ್ಲಿ ಕೆಲಸ ಮಾಡುವವರು ಹೆಚ್ಚು ಹೊರ ರಾಜ್ಯದ ಕಾರ್ಮಿಕರಾಗಿದ್ದು, ಅನಿರೀಕ್ಷಿತವಾಗಿ ದಾಳಿ ನಡೆಸಿ ಮಾಲೀಕರೊಂದಿಗೆ ಸಭೆ ನಡೆಸಿ ಅನುಮಾನಾಸ್ಪದ ಕೆಲಸಗಾರರ ಬಗ್ಗೆ ಮಾಹಿತಿ ಪಡೆದು ಮಾದಕ ವಸ್ತು ಸೇವನೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತನಾಡಿ, ಈ ಸಂಬಂಧ ಪೋಷಕರಿಂದ ಮುಚ್ಚಳಿಕೆ ಪತ್ರವನ್ನು ಪಡೆಯುವ ಪ್ರಕ್ರಿಯೆಯನ್ನು ಜಾರಿಗೆ ತರಲು ಸಂಬಂಧಪಟ್ಟ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಿಗೆ ಸೂಕ್ತ ಮಾರ್ಗದರ್ಶನ ನೀಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಅಬಕಾರಿ ಇಲಾಖೆಯ ನಿರೀಕ್ಷಕ ಎಚ್.ಸಂತೋಷ್ ಕುಮಾರ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿರುವ ಮದ್ಯದಂಗಡಿಗಳು, ಬಾರ್‌ಗಳು, ಕ್ಲಬ್‌ಗಳು, ರೆಸಾರ್ಟ್ಗಳ ಮೇಲೆ ನಿರಂತರವಾಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯಚರಣೆ ಕೈಗೊಳ್ಳುವುದು ಎಂದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಅರಣ್ಯ ಇಲಾಖೆಯ ಅಧೀಕ್ಷಕರಾದ ಅಭಿಷೇಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸಹಾನ ಎಸ್.ಹಾದಿಮನಿ, ಡಿಡಿಪಿಯು ಪಿ.ಅರ್.ವಿಜಯ, ಡಿಡಿಪಿಐ ಬಸವರಾಜು, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಪಿ.ಎನ್.ಸೋಮಣ್ಣ, ಕಾರಾಗೃಹ ಅಧಿಕಾರಿ ಸಂಜಯ್ ಕುಮಾರ್, ಸಹಾಯಕ ಡ್ರಗ್ ನಿಯಂತ್ರಕರಾದ ಹೆಚ್.ಎಂ.ಹರೀಶ್, ಹಿರಿಯ ಪೊಲೀಸ್ ಅಧಿಕಾರಿ ಮೇದಪ್ಪ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.