ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

KannadaprabhaNewsNetwork | Published : May 30, 2024 12:55 AM

ಸಾರಾಂಶ

ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಆರತಿ ಬೆಳಗಿ, ಪುಷ್ಪಾರ್ಚನೆಗೈದು ಬರಮಾಡಿಕೊಂಡರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಬಂಟ್ವಾಳ ಉತ್ತಮ ಮಾನಸಿಕ ಸಂಸ್ಕಾರದ ಮೂಲಕ ಮಕ್ಕಳ ವ್ಯಕ್ತಿತ್ವ ಅರಳಬೇಕಿದೆ, ಈ‌ ನಿಟ್ಟಿನಲ್ಲಿ ಶಾಲಾ ಶಿಕ್ಷಣದ ಜೊತೆಗೆ ಮಕ್ಕಳ ಪೋಷಕರ ಜವಬ್ದಾರಿಯೂ ಮಹತ್ವದ್ದು ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಹೇಳಿದರು.

ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ನೂರು ಶೇಕಡಾ ಅಂಕಗಳಿಕೆಯೊಂದೇ ಶಿಕ್ಷಣದ ಉದ್ದೇಶವಲ್ಲ, ಅದರ ಜೊತೆ ಕಲೆ ಸಾಹಿತ್ಯ ವಿಜ್ಞಾನ, ಕ್ರೀಡೆ, ಸಂಸ್ಕೃತಿ ಮೇಳೈಸಿದಾಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕ್ಯವಾಗುತ್ತದೆ. ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಇಂತಹ ಶಿಕ್ಷಣದ ಮೂಲಕ ನಿಜಾರ್ಥದ ಶಿಕ್ಷಣ ನೀಡುವ ಕಾರ್ಯ ನಡೆಸುತ್ತಿದೆ. ಗುಣಮಟ್ಟದ ಶಿಕ್ಷಣದ ಕನಸು ಹೊತ್ತಿರುವ ಆಡಳಿತ ಮಂಡಳಿಯೊಂದಿಗೆ ಎಲ್ಲ ಪ್ರಜ್ಞಾವಂತರು ಒಂದಾಗಿ ಹೆಜ್ಜೆ ಹಾಕಬೇಕಾಗಿದೆ ಎಂದರು.

ನಿವೃತ್ತ ಸೈನಿಕ ಮಾಧವ ಕುಲಾಲ್ ಮಾತನಾಡಿ, ಅತ್ಯುತ್ತಮ ರೀತಿಯ ಶಿಕ್ಷಣವನ್ನು ನೀಡುತ್ತಿರುವ ಬಾಲವಿಕಾಸ ಶಿಕ್ಷಣ ಸಂಸ್ಥೆ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪುಗೊಳಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಜೆ. ಪ್ರಹ್ಲಾದ್ ಶೆಟ್ಟಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಕೇಂದ್ರೀಕರಿಸಿ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ನಡೆಸುತ್ತಿದೆ. ಎಲ್ಲ ಪೋಷಕರ, ಹಿತೈಷಿಗಳ ಸಹಕಾರ ಮುಂದೆಂದೂ ಅಪೇಕ್ಷಣೀಯ ಎಂದವರು ಹೇಳಿದರು.

ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ವಿ. ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಜೆ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿದರು. ಶಿಕ್ಷಕಿ ಯಜ್ಞೇಶ್ವರಿ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸುಧಾ ಎನ್. ರಾವ್, ಸುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಮುನ್ನ ರಾಷ್ಷ್ರ ಧ್ವಜಾರೋಹಣ ನಡೆಯಿತು.‌ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಆರತಿ ಬೆಳಗಿ, ಪುಷ್ಪಾರ್ಚನೆಗೈದು ಬರಮಾಡಿಕೊಂಡರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

Share this article