ಬ್ಯಾಡಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಆಧುನಿಕ ನಾಗರಿಕತೆಯ ಅವಳಿ ಸ್ತಂಭಗಳಾಗಿದ್ದು, ಅವುಗಳಲ್ಲಿ ಪರಿವರ್ತನಾ ಶಕ್ತಿಯಿದೆ. ವಿಜ್ಞಾನವು ನೈಸರ್ಗಿಕ ಪ್ರಪಂಚದ ವ್ಯವಸ್ಥಿತ ಜ್ಞಾನ ಒದಗಿಸಿದರೆ ತಂತ್ರಜ್ಞಾನವು ಪ್ರಾಯೋಗಿಕ ಸಾಧನಗಳು ಮತ್ತು ವ್ಯವಸ್ಥೆಗಳನ್ನು ರಚಿಸಲು ಸಹಕರಿಸಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಟೋಯೋಟಾ ಸಂಸ್ಥೆ ಕಾರ್ಯವೈಖರಿ ಶ್ಲಾಘನೀಯ
ಇಲ್ಲಿಯವರೆಗೂ ನಾವೆಲ್ಲಾ ತಿಳಿದುಕೊಂಡಂತೆ ಟೋಯೋಟಾ ಸಂಸ್ಥೆಯು ವಾಹನಗಳ ಮಾರಾಟ ಮಾಡಿ ಕೇವಲ ಲಾಭದ ಉದ್ದೇಶಕ್ಕಾಗಿ ನಿರ್ಮಿತಗೊಂಡಿರುವ ಬಹುರಾಷ್ಟ್ರೀಯ (ಮಲ್ಟಿ ನ್ಯಾಷನಲ್) ಸಂಸ್ಥೆ ಎಂದು ಪರಿಭಾವಿಸಿಕೊಂಡಿದ್ದೆವು, ಆದರೆ ಒಂದು ಹೆಜ್ಜೆ ಮುಂದು ಹೋಗಿರುವ ಟೋಯೋಟಾ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಪ್ರಯೋಗಾಲಯದಲ್ಲಿ ತರಬೇತಿ ನೀಡಿ ಕೌಶಲ್ಯ ಹೊಂದಿದ ವಿದ್ಯಾರ್ಥಿಗಳಿಗೆ ಉದ್ಯೋಗದ ಭರವಸೆ (ಜಾಬ್ ಓರಿಯೆಂಟೆಡ್) ನೀಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ಸ್ವಾಗತಾರ್ಹ ಎಂದರು.ತಂತ್ರಜ್ಞಾನ ಇಲ್ಲದ ಕ್ಷೇತ್ರವಿಲ್ಲ: ಎಸ್‌ಡಿಎಂಸಿ ಉಪಾಧ್ಯಕ್ಷ ದತ್ತಾತ್ರೇಯ ಸಾಳುಂಕೆ ಮಾತನಾಡಿ, ಯಾವುದೇ ಕ್ಷೇತ್ರಗಳು ತಂತ್ರಜ್ಞಾನದಿಂದ ದೂರ ಉಳಿದಿಲ್ಲ ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ರೋಗಗಳನ್ನು ಪತ್ತೆ ಹಚ್ಚುವಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ತಂತ್ರಜ್ಞಾನ ಕೆಲಸ ಮಾಡಿದರೇ, ಜೀವ ಉಳಿಸುವ ಸುಧಾರಿತ ಔಷಧಿಗಳನ್ನು ನೀಡುವಲ್ಲಿ ವಿಜ್ಞಾನ ಸಹಕರಿಸಲಿದೆ. ಹೀಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇವೆರಡರ ಸಮ್ಮಿಲನ ಇಂದು ಮನುಷ್ಯ ಬದುಕುಳಿಯಲು ನಿರ್ಣಾಯಕವಾಗಿ ಕಾರ್ಯ ನಿರ್ವಹಸಲಿದೆ ಎಂದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ಮುನಾಫ್ ಎರೇಶೀಮಿ, ವೀರೇಶ ಮತ್ತೀಹಳ್ಳಿ, ಜೈಭೀಮ್ ರಾರಾವಿ, ಡಾ.ಎ.ಎಂ.ಸೌದಾಗರ, ಮಾಲತೇಶ ಆಡಿನವರ, ಮಾಲತೇಶ ಕಂಬಳಿ, ಗುರುಸಿದ್ದಪ್ಪ ಮೂಡ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಹುಲ್ಯಾಳ, ಪ್ರಾಚಾರ್ಯ ಡಾ. ಮಾಲತೇಶ ಬಂಡೆಪ್ಪನವರ, ಉಪಪ್ರಾಚಾರ್ಯ ಬೀರೇಶ ಡೊಕ್ಕೇರ ಹಾಗೂ ಇನ್ನಿತರರಿದ್ದರು.