ಬ್ಯಾಡಗಿ: ಭಾರತೀಯ ಸಂಸ್ಕತಿಯಲ್ಲಿ ವೈವಾಹಿಕ ಜೀವನ ಸೇರಿದಂತೆ ಉಡುಗೆ ತೊಡುಗೆ ಸಂಸ್ಕಾರ ಎಲ್ಲವೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿರ್ಮಿತವಾಗಿದೆ. ಯುವಕರು ಯಾವುದೇ ಕಾರಣಕ್ಕೂ ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡದಂತೆ ಮಾಜಿ ಶಾಸಕ, ಬಿಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶಗೌಡ ಪಾಟೀಲ ಸಲಹೆ ನೀಡಿದರು.ಪಟ್ಟಣದ ಬಿಇಎಸ್ ಶಿಕ್ಷಣ ಸಂಸ್ಥೆಯ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನಾಚರಣೆ ಕಾರ‍್ಯಕ್ರಮಕ್ಕೆ ಡೋಲು ಬಡಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಭಾರತೀಯ ಸಂಸ್ಕೃತಿಗೆ ಸಾವಿರಾರು ವರ್ಷದ ಇತಿಹಾಸವಿದೆ. ವೇದಗಳ ಕಾಲದಿಂದಲೂ ಹಿಡಿದು ಹರಪ್ಪ ಮೆಹೆಂಜೋದಾರ ನಗರಗಳ ಉತ್ಖನನದವರೆಗೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಇಂದಿಗೂ ಮುಂದುವರಿದುಕೊಂಡು ಬಂದಿದ್ದು, ತನ್ಮೂಲಕ ವಿಶ್ವದ ಬಹುತೇಕ ಸಂಸ್ಕೃತಿಗಳನ್ನು ಮೆಚ್ಚಿಸುವಂತಿದೆ ಎಂದರು. ಕೊರೋನಾ ಮೆಟ್ಟಿ ನಿಂತ ಭಾರತ: ಸಂಸ್ಥೆಯ ನಿರ್ದೇಶಕ ಡಾ. ಎಸ್.ಎನ್. ನಿಡಗುಂದಿ ಮಾತನಾಡಿ, ನಮ್ಮ ಜನಪದರು ರೂಢಿಸಿಕೊಟ್ಟಿರುವ ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಆಹಾರವನ್ನು ಸೇವಿಸಿದ ನಾವು ಕೊರೋನಾದಂತಹ ಮಾರಣಾಂತಿಕ ರೋಗವನ್ನು ನಿಗ್ರಹಿಸಲು ಸಾಧ್ಯವಾಯಿತು. ಇದೇ ವೇಳೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾವು- ನೋವಿನ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕೆ ಪ್ರಮುಖ ಕಾರಣ ಆಹಾರ ಪದ್ಧತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಎನ್.ಎಸ್. ಪ್ರಶಾಂತ, ಡಾ. ಸುರೇಶಕುಮಾರ ಪಾಂಗಿ, ಡಾ. ಪ್ರಭುಲಿಂಗ ದೊಡ್ಮನಿ, ಶಿವನಗೌಡ ಪಾಟೀಲ, ಶಶಿಧರ ಮಾಗೋಡ, ಪ್ರಶಾಂತ ಜಂಗಳೇರ, ಚನ್ನಬಸಪ್ಪ ಗೂರಣ್ಣವರ, ನಿಂಗಪ್ಪ ಕುಡುಪಲಿ, ಕಿರಣ ಡಂಬರ ಮತ್ತೂರ, ಕುಮಾರ ಮಾಳಗಿ, ಅಂಬಿಕಾ ನವಲೆ, ಜ್ಯೋತಿ ಹಿರೇಮಠ, ನಿವೇದಿತಾ ವಾಲಿಶೆಟ್ಟರ, ಶೃತಿ ಹುಗ್ಗಿ, ಸಿಬ್ಬಂದಿಗಳಾದ ಸಂತೋಷ ಉದ್ಯೋಗಣ್ಣನವರ, ಮಲ್ಲಿಕಾರ್ಜುನ ಕೋಡಿಹಳ್ಳಿ, ಮಹಾಂತೇಶ ಕರಗಲ್ಲ, ಚನ್ನಪ್ಪ ದೊಡ್ಮನಿ, ಬಸಮ್ಮ ನಾಯ್ಕರ್, ಮಂಜು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.