ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಪಾತ್ರ ಮಹತ್ವದ್ದು: ಸುಧಾಕರ ಗುಡಿ

KannadaprabhaNewsNetwork | Published : Jul 25, 2024 1:16 AM

ಸಾರಾಂಶ

Scouts and guides role is important: Sudhakar Gudi said

ಕನ್ನಡಪ್ರಭ ವಾರ್ತೆ ಶಹಾಪುರ

ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಶಿಸ್ತು ಹಾಗೂ ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುವಲ್ಲಿ ಸಹಕಾರಿ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಸುಧಾಕರ ಗುಡಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಗತ್‌ಸಿಂಗ್ ರೋರ್ಸ್ ಮತ್ತು ಪಿ.ವಿ. ಸಿಂಧು ರೋರ್ಸ್ ಘಟಕಗಳ ವತಿಯಿಂದ ನಡೆದ ಸಸಿ ನೆಡುವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ಕುರಿತು ಉಪನ್ಯಾಸ ನೀಡಿದರು.

ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು, ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ ಎಂದರು.

ಸ್ಕೌಟ್ಸ್ ಗೈಡ್ಸ್ ತಾ.ಕಾರ್ಯದರ್ಶಿ ಬಸವರಾಜ ಗೋಗಿ, ಯುವಜನರಲ್ಲಿ ರೋವರ್ ಮತ್ತು ರೋರ್ಸ್‌ ಘಟಕಗಳು ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ಮತ್ತು ಮಾನವೀಯ ಮೌಲ್ಯ ಬೆಳೆಸುವುದರೊಂದಿಗೆ ಜವಾಬ್ದಾರಿಯುತ ನಾಗರಿಕನಾಗಿ ಸಾಮಾಜಿಕ ಮುಖ್ಯವಾಹಿನಿಯಲ್ಲಿ ಆರೋಗ್ಯಕರ ಜೀವನವನ್ನು ಸಾಗಿಸಲು ತರಬೇತಿ ನೀಡುತ್ತದೆ ಎಂದರು.

ಪ್ರೊ. ಸಿದ್ಧಪ್ಪ ದಿಗ್ಗಿ ಮತ್ತು ಪ್ರಾಂಶುಪಾಲ ಡಾ. ಸಂಗಪ್ಪ ಎಸ್. ರಾಂಪೂರೆ ಮಾತನಾಡಿದರು. ಡಾ. ಎಂ.ಎನ್. ಸೌದಗಾರ ಮಾತನಾಡಿದರು. ಕಾಳಮ್ಮ ಎಚ್.ಎಸ್. ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಡಾ. ಶಂಕ್ರಮ್ಮ ಪಾಟೀಲ್, ರಾಘವೇಂದ್ರ ಹಾರಣಗೇರಾ ಇದ್ದರು. ಚಿನ್ನಮ್ಮ ಸ್ವಾಗತಿಸಿದರು. ಅಶ್ವಿನಿ, ರಶ್ಮಿ, ಪ್ರಿಯಾಂಕ, ಕವಿತಾ ಪ್ರಾರ್ಥಿಸಿದರು. ಕಾಲೇಜಿನ ಆವರಣದಲ್ಲಿ ರೋವರ್ ಮತ್ತು ರೋರ್ಸ್‌ ವಿದ್ಯಾರ್ಥಿಗಳು ವಿವಿಧ ಸಸಿಗಳನ್ನು ನೆಡುವ ಕಾರ್ಯಕ್ರಮ ನೆರವೇರಿಸಿದರು.

------

ಫೋಟೊ: 24ವೈಡಿಆರ್1:

ಶಹಾಪುರ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಸಿ ನೆಡುವ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

------

Share this article