ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರಿಯ ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ ಆ್ಯಂಡ್ ರೇಂಜರ್ಸ್ ಘಟಕ (ಸ್ಕೌಟ್ಸ್ ಗೈಡ್ಸ್ ಹಿರಿಯರ ವಿಭಾಗ) ಸೋಮವಾರ ಆಯೋಜಿಸಿದ್ದ ಒಂದು ದಿನದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತುಪ್ರದರ್ಶನ ‘ಪ್ರಮುಕ- 2025’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇಶದ ಭವಿಷ್ಯವು ಯುವಪೀಳಿಗೆಯ ಮೇಲೆ ಅವಲಂಬಿತವಾಗಿದ್ದು, ಸ್ಕೌಟ್ಸ್ ಗೈಡ್ಸ್‌ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗಿವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯು ಈ ದೆಸೆಯಲ್ಲಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.ಕಾಲೇಜಿನ ಹಿರಿಯ ವಿದ್ಯಾರ್ಥಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ವೈಸ್ ಚೇರ್ಮನ್ ಅಶ್ವಿತ್ ಜೈನ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ, ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಸೇವೆ. ನಿಜವಾದ ರಾಷ್ಟ್ರ ನಿರ್ಮಾಣವೆಂದರೆ ಮನಸ್ಸುಗಳನ್ನು ಕಟ್ಟುವಂತದ್ದು. ಮನುಷ್ಯರು ಯಂತ್ರಗಳಂತಾಗಿ ಸಂವೇದನೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆಗಳು ಅರ್ಥ ಕಂಡುಕೊಳ್ಳುತ್ತವೆ ಎಂದರು.
ವಿವಿಧ ಸ್ಪರ್ಧೆಗಳ ಟ್ರೋಫಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿ ನಾಯಕರಾದ ಹರ್ಷಿಣಿ ಮತ್ತು ದಿಲೀಪ್ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಕಾಲೇಜುಗಳ ರೋವರ್ಸ್ ರೇಂಜರ್ಸ್, ರೋವರ್ ಸ್ಕೌಟ್ ಲೀಡರ್ಸ್, ರೇಂಜರ್ ಲೀಡರ್ಸ್, ಸ್ಥಳೀಯ ಎಸ್.ಡಿ.ಎಂ. ಶಾಲೆಗಳ ಸ್ಕೌಟ್ಸ್ ಗೈಡ್ಸ್, ಕಬ್ ಬುಲ್ ಬುಲ್, ಬನ್ನೀಸ್, ಸ್ಕೌಟ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್ ಪಾಲ್ಗೊಂಡಿದ್ದರು.
ಬೆಳಗ್ಗೆ ಕಾಲೇಜು ಒಳಾಂಗಣದಲ್ಲಿ ಸ್ಕೌಟ್ಸ್ ಧ್ವಜಾರೋಹಣ ಹಾಗೂ ಪ್ರಾರ್ಥನೆ ನೆರವೇರಿತು. ಸ್ಕೌಟ್ಸ್ ಗೈಡ್ಸ್ ಶಿಬಿರಗಳಲ್ಲಿರುವ ಸಾಹಸಮಯ ಆಟಗಳ ಮಾದರಿಗಳು, ಟೆಂಟ್, ಮರದ ಮೇಲಿನ ಅಟ್ಟಳಿಗೆ, ಬಿದಿರು ಮತ್ತು ಹಗ್ಗಗಳನ್ನು ಬಳಸಿ ತಯಾರಿಸಿದ ಏಣಿ ಸೇರಿದಂತೆ ಸ್ಕೌಟಿಂಗ್ ಸಂಬಂಧಿತ ವಿವಿಧ ವಸ್ತು, ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.