ಹೂವಿನಹಡಗಲಿ: ಬೆಳ್ಳಂಬೆಳಗ್ಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ, ಸೈಕಲ್ ಮೂಲಕ ಸಂಚರಿಸಿದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹಾಗೂ ಶಾಸಕ ಕೃಷ್ಣನಾಯ್ಕ ಜನರ ಸಮಸ್ಯೆ ಆಲಿಸಿದರು.
ನಂತರದಲ್ಲಿ ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರಿಗೆ ಬಸ್ಸಿನ ಸೌಲಭ್ಯ ಕುರಿತು ಮಾಹಿತಿ ಪಡೆದ ಅವರು, ಬಸ್ ನಿಲ್ದಾಣದ ಶೌಚಾಲಯ ವೀಕ್ಷಣೆ ಮಾಡಿ, ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಸಾಕಷ್ಟು ಪ್ರಯಾಣಿಕರು ಆಗಮಿಸುತ್ತಾರೆ, ಆದರೆ ಇಲ್ಲಿನ ಶೌಚಾಲಯ ನೋಡಿದರೆ ಜನರ ಬೇಡಿಕೆಗೆ ತಕ್ಕಷ್ಟು ಶೌಚಾಲಯ ವ್ಯವಸ್ಥೆ ಇಲ್ಲ, ಕೂಡಲೇ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಹಾಗೂ ಶಾಸಕರು ಸೂಚಿಸಿದರು.
ಬಂಗಾರೆಪ್ಪ ನಗರಕ್ಕೆ ಭೇಟಿ ನೀಡಿದಾಗ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಗಮನಿಸಿದ ಡಿಸಿ, ಕೂಡಲೇ ಚರಂಡಿ ಬಿಟ್ಟು ಪೈಪ್‌ಲೈನ್ ಸ್ಥಳಾಂತರಿಸುವಂತೆ ಅಧಿಕಾರಿಗೆ ಸೂಚಿಸಿದರು.ಈ ಬಡಾವಣೆಯಲ್ಲಿ ನಡೆಯುತ್ತಿದ್ದ ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಮಹಿಳೆಯ ಸಮಸ್ಯೆಯನ್ನು ಆಲಿಸಿದರು. ಪುರಸಭೆಯವರು ನಮ್ಮ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆಂದು ಮಹಿಳೆ ದೂರಿದರು. ಬಡಾವಣೆಯ ಒಂದು ಭಾಗದಲ್ಲಿ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಆದರೆ, ರೈತರೊಬ್ಬರು ಈ ಜಾಗ ನಮ್ಮದ್ದು, ಇದಕ್ಕೆ ಪಹಣಿ ಇದೆ ಎಂದು ತೊಂದರೆ ನೀಡುತ್ತಿದ್ದಾರೆ ಎಂದು ಡಿಸಿ ಎದುರಿಗೆ ಪುರಸಭೆ ಮುಖ್ಯಾಧಿಕಾರಿ ಹೇಳಿದರು.
ಸೈಕಲ್ ಸವಾರಿಯೊಂದಿಗೆ ಸ್ಮಶಾನಕ್ಕೆ ಭೇಟಿ ನೀಡಿದ ಅವರು, ಸ್ಮಶಾನ ಜಾಲಿ ಮುಳ್ಳುಗಳಿಂದ ತುಂಬಿದ್ದು ನೋಡಿ, ಇಂತಹ ಜಾಗದಲ್ಲಿ ಶವಗಳ ಸಂಸ್ಕಾರ ಹೇಗೆ ಮಾಡಬೇಕು. ಈ ಕುರಿತು ಅಭಿವೃದ್ಧಿಗಾಗಿ ಏನು ಕ್ರಿಯಾ ಯೋಜನೆ ಮಾಡಿದ್ದೀರಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಪ್ರಶ್ನಿಸಿದಾಗ, ಈಗಾಗಲೇ ನಿಮ್ಮ ಕಚೇರಿಗೆ ಕ್ರಿಯಾ ಯೋಜನೆ ಫೈಲ್ ಕಳಿಸಿದ್ದೇವೆ ಎಂದು ಹೇಳಿದರು. ಸ್ಥಳದಲ್ಲೇ ಡಿಸಿ ಕಚೇರಿಯ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಸ್ಮಶಾನ ಅಭಿವೃದ್ಧಿ ಯೋಜನೆ ಮಂಜೂರು ಮಾಡಿ ಎಂದು ಹೇಳಿದರು.
ಸ್ಮಶಾನಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೇವೆ. ಎಲ್ಲ ಕಡೆಗೂ ಮೂಲಭೂತ ಸೌಲಭ್ಯಗಳಾದ ನೀರು, ನೆರಳು ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದಂತೆ ತಾಲೂಕಿನ ಮಾಗಳ ಹಾಗೂ ಹುಗಲೂರು ಗ್ರಾಮಗಳಿಗೆ ಸ್ಮಶಾನ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.