ಯಲಬುರ್ಗಾ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಎಸ್ಡಿಎಂಸಿ ಶ್ರಮ ಸಾಕಷ್ಟಿದೆ ಎಂದು ಎಸ್ಡಿಎಂಸಿ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ ಗಂಗವಾಡಿ ಹೇಳಿದರು.
೨೦೦೧ರಲ್ಲಿ ಜಾರಿಗೊಳಿಸಲಾದ ಶಾಲಾ ಮೇಲುಸ್ತುವಾರಿ ಸಮಿತಿಯು ೨೫ ವರ್ಷಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಶಾಲಾ ಅಭಿವೃದ್ಧಿಯಲ್ಲಿ ಎಸ್ಡಿಎಂಸಿ ಪಾತ್ರ ವಹಿಸಿದೆ. ಹೀಗಾಗಿ ಶಾಲೆಗಳು ಸಾಕಷ್ಟು ಅಭಿವೃದ್ಧಿಯಾಗಿವೆ. ಆದರೆ ಸರ್ಕಾರ ಈ ಸಮಿತಿಯ ಜವಾಬ್ದಾರಿ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಶಾಲೆಗಳಿಗೆ ಇನ್ನೂ ಹೊಸ ಯೋಜನೆ, ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಬೇಕು. ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮೊದಲು ಸಮಿತಿಯ ಜವಾಬ್ದಾರಿ ಮತ್ತು ಮಾಹಿತಿ ತಿಳಿದುಕೊಂಡು ಕೆಲಸ ನಿರ್ವಹಿಸಿದಾಗ ಶಾಲೆ ಪ್ರಗತಿಗೊಳುತ್ತವೆ. ಕೆಲ ಶಾಲೆಗಳಲ್ಲಿ ಸಮಿತಿಗೆ ಮಾಹಿತಿ ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆ ನೀಡುತ್ತಿಲ್ಲ. ಕಾರಣ ಮಾಹಿತಿ ನೀಡಿದರೆ ಎಲ್ಲವನ್ನು ಕೇಳುತ್ತಾರೆ ಎನ್ನುವುದು ಅವರ ವಾದವಾಗಿದೆ. ಸಂವಿಧಾನದ ಬದ್ಧವಾಗಿ ಎಸ್ಡಿಎಂಸಿಯವರು ಆಡಳಿತ ಮಾಡಿ ಯಾರೇ ತಪ್ಪು ಮಾಡಿದರೇ ಅವರನ್ನು ಕಾನೂನು ಕ್ರಮ ವಹಿಸಿ ಇಲಾಖೆಗೆ ಮನವಿ ಸಲ್ಲಿಸಬೇಕು ಎಂದರು.
ಬಿಇಒ ಅಶೋಕ ಗೌಡರ ಮಾತನಾಡಿ, ಕ್ಷೇತ್ರದ ಪ್ರತಿ ಶಾಲೆಯಲ್ಲಿ ಶಿಕ್ಷಕರು ಜತೆಗೂಡಿ ಕ್ರಿಯಾಶೀಲವಾಗಿ ಎಸ್ಡಿಎಂಸಿಯವರು ಮಕ್ಕಳ ಪ್ರಗತಿಗೆ ಕೈಜೋಡಿಸಿದ್ದಾರೆ. ಸಮಿತಿ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿವೆ. ಶಾಸಕ ಬಸವರಾಜ ರಾಯರಡ್ಡಿ ಶಾಲೆಗಳುಗೆ ಮೂಲ ಸೌಕರ್ಯ ಒದಗಿಸಿದ್ದಾರೆ ಎಂದರು.ಸಂಘದ ಜಿಲ್ಲಾಧ್ಯಕ್ಷ ದೇವರಾಜ ಕಿನ್ನಾಳ, ತಾಲೂಕಾಧ್ಯಕ್ಷ ಗೌಡಪ್ಪ ಬಲಕುಂದಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಕಳಕಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.