ಟಿಕೆಟ್ ದರ ಹೆಚ್ಚಳ ಖಂಡಿಸಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ

KannadaprabhaNewsNetwork | Published : Jan 8, 2025 12:18 AM

ಸಾರಾಂಶ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎಂಡಬ್ಲ್ಯೂಕೆಆರ್‌ಸಿ ಹಾಗೂ ಕೆಕೆಆರ್‌ಟಿಸಿ ಸೇರಿದಂತೆ ರಾಜ್ಯದ ಎಲ್ಲ ಸಾರಿಗೆಯ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಕಾರ್ಮಿಕ ವರ್ಗ, ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿರುವ ಕ್ರಮ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ಕರಪತ್ರ ಹಂಚಿ ಅರಿವು ಮೂಡಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎಂಡಬ್ಲ್ಯೂಕೆಆರ್‌ಸಿ ಹಾಗೂ ಕೆಕೆಆರ್‌ಟಿಸಿ ಸೇರಿದಂತೆ ರಾಜ್ಯದ ಎಲ್ಲ ಸಾರಿಗೆಯ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಕಾರ್ಮಿಕ ವರ್ಗ, ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಟೀಕಿಸಿದರು.

ನಾಡಿನ ಜನರು ಈಗಾಗಲೇ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ನಿರ್ವಹಣಾ ವೆಚ್ಚಗಳಿಂದ ಹೆಣಗಾಡುತ್ತಿದ್ದಾರೆ. ಅದರ ಜೊತೆಗೆ ಬಸ್ ದರ ಏರಿಕೆಯು ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ. ಸರ್ಕಾರ ಈ ಏರಿಕೆಯಿಂದ ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಇದೊಂದು ಪೊಳ್ಳು ವಾದ. ಏಕೆಂದರೆ ಅತ್ಯಧಿಕ ಬಸ್ ಪ್ರಯಾಣಿಕರು ಪುರುಷರೇ ಆಗಿದ್ದು, ಅವರು ಈ ಹೆಚ್ಚಳದ ಭಾರವನ್ನು ಹೊರ ಬೇಕಾಗಿದೆ. ಇದು ಪ್ರತಿ ಕುಟುಂಬಕ್ಕೂ ಹೊರೆ ಆಗಲಿದೆ ಎಂದು ದೂರಿದರು.

ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ದರ ಏರಿಕೆ ಪ್ರತಿಬಿಂಬಿಸುತ್ತದೆ. ರಾಜ್ಯ ಸರ್ಕಾರ ಈ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಜನರ ಮೇಲೆ ಅನಗತ್ಯ ಹೊರೆಯನ್ನು ಹಾಕದೆ ಸಾರಿಗೆ ಕ್ಷೇತ್ರದ ಆರ್ಥಿಕ ಕೊರತೆಯನ್ನು ನಿರ್ವಹಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಮನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಮ್ಜದ್ ಶರೀಫ್, ಉಪಾಧ್ಯಕ್ಷ ಮಹಬೂಬ್ ಪಾಷಾ, ಅಸಾದುಲ್ಲಾ ಶರೀಫ್ ಮತ್ತಿತರರು ಭಾಗವಹಿಸಿದ್ದರು.

Share this article