ಮಲ್ಪೆ ಸಮುದ್ರತೀರದಲ್ಲಿ ಎಳ್ಳಮಾವಾಸ್ಯೆ ಸಮುದ್ರಸ್ನಾನ

KannadaprabhaNewsNetwork | Published : Jan 12, 2024 1:45 AM

ಸಾರಾಂಶ

ಎಳ್ಳಮವಾಸ್ಯೆಯ ಪ್ರಯುಕ್ತ ಗುರುವಾರ ಮಲ್ಪೆ ಸಮುದ್ರ ತೀರದಲ್ಲಿ ಸಾವಿರಾರು ಮಂದಿ ಸಮುದ್ರ ಸ್ನಾನ ಮಾಡಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಪ್ರತಿವರ್ಷದಂತೆ ಗುರುವಾರ ಮಲ್ಪೆ ಸಮುದ್ರ ತೀರದಲ್ಲಿ ಎಳ್ಳುಅಮಾವಾಸ್ಯೆ ಆಚರಣೆ ನಡೆಯಿತು. ಜಿಲ್ಲೆ ಮಾತ್ರವಲ್ಲ ಹೊರ ಜಿಲ್ಲೆಗಳಿಂದಲೂ ಬಂದ ಸಾವಿರಾರು ಮಂದಿ ಎಳ್ಳಮಾವಾಸ್ಯೆಯ ಪ್ರಯುಕ್ತ ಸಮುದ್ರ ಸ್ನಾನ ಮಾಡಿದರು. ಆದರೆ ಈ ಹಿಂದಿನ ವರ್ಷಕ್ಕಿಂತ ಈ ಬಾರಿ ಸಮುದ್ರಸ್ನಾನಕ್ಕೆ ಬಂದ ಜನರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು ಎಂದು ಸಮುದ್ರಸ್ನಾನಕ್ಕೆ ಬಂದವರು ಹೇಳುತ್ತಿದ್ದರು. ಎಳ್ಳಮವಾಸ್ಯೆಯ ದಿನ ಸಮುದ್ರದಲ್ಲಿ ಸ್ನಾನ ಮಾಡಿದರೆ ಪಾಪವೆಲ್ಲಾ ತೊಳೆದು ಹೋಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಸಮುದ್ರದ ಉಪ್ಪು ನೀರಿಗೆ ಅನೇಕ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದೆ, ಆದ್ದರಿಂದ ಜನರು ಎಳ್ಳಮಾವಾಸ್ಯೆಯ ಪ್ರಯುಕ್ತವಾದರೂ ಸಮುದ್ರ ಸ್ನಾನ ಮಾಡುವುದು ಪ್ರಶಸ್ತವಾಗಿದೆ. ಮುಂಜಾನೆ ಇನ್ನೂ ಸೂರ್ಯೋದಯಕ್ಕೆ ಮೊದಲೇ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಿಂದಲೂ ಜನರು ಮಲ್ಪೆ, ಪಡುಬಿದ್ರಿ, ಕಾಪು, ಕೋಡಿ, ಮರವಂತೆ ಇತ್ಯಾದಿ ಸಮುದ್ರ ತೀರಗಳಿಗೆ ಬಂದು ಸಮುದ್ರ ಸ್ನಾನ ಮಾಡುತ್ತಾರೆ. ಈ ಅವಧಿಯಲ್ಲಿ ಚಳಿ ಇರುವ ಕಾರಣ ಕೆಲವರು ಬಿಸಿಲೇರಿದ ಮೇಲೆ ಬಂದು ಸ್ನಾನ ಮಾಡುವವರೂ ಇದ್ದಾರೆ. ಎಳ್ಳಮಾವಾಸ್ಯೆ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಪಿತೃಗಳಿಗೆ ತರ್ಪಣ ಬಿಡುವ ಪದ್ಧತಿ ಕೂಡ ಇದೆ. ಅದಕ್ಕಾಗಿ ಎಳ್ಳು ಹೋಮವನ್ನೂ ಮಾಡಲಾಗುತ್ತದೆ. ಇನ್ನು ಕೆಲವರು ತಮ್ಮ ಕುಟುಂಬದಲ್ಲಿ ಮದುವೆಯಾಗದೆ ಅಗಲಿದವರ ಪ್ರೇತಗಳಿಗೆ ಅಂಥದ್ದೇ ಇನ್ನೊಂದು ಕುಟುಂಬದವರ ಜೊತೆ ಸೇರಿ ಪ್ರೇತ ವಿವಾಹಗಳನ್ನೂ ಮಾಡುವ ಪದ್ಧತಿಯೂ ಸಮುದ್ರ ತೀರದಲ್ಲಿ ಈ ದಿನದಂದು ನಡೆಯುತ್ತದೆ.

ಮಠಾಧೀಶರಿಂದ ಮಟ್ಟು ತೀರದಲ್ಲಿ ಸಮುದ್ರ ಸ್ನಾನ: ಎಳ್ಳಮಾವಾಸ್ಯೆ ಪ್ರಯುಕ್ತ ಗುರುವಾರ ಮಟ್ಟು ಕಡಲ ಕಿನಾರೆಯಲ್ಲಿ ಉಡುಪಿಯ ಮಠಾಧೀಶರು ತಮ್ಮ ಶಿಷ್ಯವರ್ಗದವರೊಂದಿಗೆ ಸಮುದ್ರ ಸ್ನಾನ ಮಾಡಿದರು.ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಟ್ಟು ತೀರದಲ್ಲಿ ಸಮುದ್ರ ಸ್ನಾನ ಮಾಡಿ ಅನುಷ್ಠಾನ ನಡೆಸಿದರು.ಈ ಸಂದರ್ಭ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್, ಸುಧೀರ ಮಟ್ಟು, ದಯಾನಂದ ಬಂಗೇರ, ಕೇಶವ ಸುವರ್ಣ, ದಿಲೀಪ್ ಮಟ್ಟು, ಪಂಚಾಯಿತಿ ಸದಸ್ಯರಾದ ನಾಗರಾಜ್ ಮಟ್ಟು, ರಾಜೇಶ್ ಉದ್ಯಾವರ ಹಾಗೂ ವೆಂಕಟೇಶ ರಾವ್ ಮೊದಲಾದವರು ಉಪಸ್ಥಿತರಿದ್ದರು.

Share this article