ಮಹಿಳೆಯರಲ್ಲಿ ಶಿಸ್ತು, ಶ್ರದ್ಧೆ, ಗುರಿ ಇದ್ದಲ್ಲಿ ಸ್ವಾವಲಂಬಿಗಳಾಗಲು ಸಾಧ್ಯ

KannadaprabhaNewsNetwork | Published : Jan 12, 2024 1:45 AM

ಸಾರಾಂಶ

ಮಹಿಳೆಯರಲ್ಲಿ ಶಿಸ್ತು, ಶ್ರದ್ದೆ, ಗುರಿ ಇದ್ದಲ್ಲಿ ಸ್ವಾವಲಂಬಿಗಳಾಗಲು ಸಾಧ್ಯ.

ಹೊಸದುರ್ಗ: ಮಹಿಳೆಯರಲ್ಲಿ ಶಿಸ್ತು, ಶ್ರದ್ದೆ, ಗುರಿ ಇದ್ದಲ್ಲಿ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಉದ್ಯಮಿ ಡಿ.ಎಸ್. ಪ್ರದೀಪ್ ಹೇಳಿದರು.

ಪಟ್ಟಣದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ವೀರೇಂದ್ರ ಹೆಗ್ಗಡೆ ಅವರು ಮನೆಗೆ ಸೀಮಿತವಾಗಿದ್ದ ಸ್ತ್ರೀಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅಕ್ಷರ, ಆರ್ಥಿಕ ಬಲ, ವ್ಯವಹಾರದ ಜ್ಞಾನ ಕಲಿಸುವ ಮೂಲಕ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಜತೆಗೆ ಆಧಾರವಾಗುವ ಕೌಶಲ್ಯ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳಿಗೆ ಸಂಸ್ಥೆ ಬೆಳಕಿನ ಹಾದಿ ತೋರುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸಂಸ್ಥೆಯ ಸಂಪರ್ಕಕ್ಕೆ ಬರುವ ಮುನ್ನ ಹಾಗೂ ಪ್ರಸ್ತುತ ನಿಮ್ಮ ಆರ್ಥಿಕ ಚೈತನ್ಯ ಹೇಗಿದೆ. ನಿಮ್ಮ ಜೀವನಮಟ್ಟ ಸುಧಾರಣೆ ಆಗಿರುವ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಈ ಹಿಂದೆ ಮಹಿಳೆಯರು ಪ್ರತಿ ವಿಷಯಕ್ಕೂ ಪುರುಷನ ಮೇಲೆ ಅವಲಂಬಿತರಾಗಿದ್ದರು. ಕಾಲ ಬದಲಾವಣೆ ಆದಂತೆ ಮಹಿಳೆ ಸ್ವಾವಲಂಬಿ ಆಗುತ್ತಿದ್ದಾಳೆ. ಮಹಿಳೆ ಆರ್ಥಿಕವಾಗಿ ಬಲವಾದಷ್ಟು ಸಮಾಜದಲ್ಲಿ ಆಕೆಯ ಸ್ಥಾನಮಾನ, ಗೌರವ ಹೆಚ್ಚಾಗುತ್ತದೆ. ಆರ್ಥಿಕ ಬಲದ ಜೊತೆಗೆ ಒಳ್ಳೆಯ ಸಂಸ್ಕಾರ ಕೂಡ ಅಷ್ಟೇ ಮುಖ್ಯ ಎಂದರು.

ಉದ್ಯಮ ಆರಂಭಕ್ಕೆ ಸಾಲ ನೀಡುವಂತೆ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ್ದಾಗ ಬ್ಯಾಂಕ್ ನವರು ಧರ್ಮಸ್ಥಳ ಸಂಘದಿಂದ ಉದ್ಯಮಶೀಲತೆಯ ತರಬೇತಿ ಪಡೆಯುವಂತೆ ಹೇಳಿದ್ದರು. ಧರ್ಮಸ್ಥಳ ಸಂಘದಿಂದ 15 ದಿನಗಳ ಕಾಲ ನೀಡಿದ ತರಬೇತಿ ನನ್ನನ್ನು ಒಳ್ಳೆಯ ಉದ್ಯಮದಾರನನ್ನಾಗಿ ರೂಪಿಸಿತು. ಧರ್ಮಸ್ಥಳ ಸಂಸ್ಥೆ ನನ್ನಂತಹ ಸಾವಿರಾರು ಜನರನ್ನು ಉದ್ಯಮಶಿಲರನ್ನಾಗಿ ಮಾಡಿದೆ. ಒಂದು ಪ್ರಬಲ ಚಿಂತನೆ ದೇಶವನ್ನೇ ಬದಲಾವಣೆ ಮಾಡುತ್ತದೆ ಎನ್ನುವುದಕ್ಕೆ ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ಧರ್ಮಸ್ಥಳ ಯೋಜನೆ ಸಂಸ್ಥೆ ಒಂದು ದೊಡ್ಡ ಉದಾಹರಣೆ ಎಂದರು.

ಕಾರ್ಯಕ್ರಮದಲ್ಲಿ ದೊಡ್ಡ ಬ್ಯಾಲದಕೆರೆ ಪ್ರಗತಿ ಬಂಧು ಸ್ವ ಸಹಾಯ ಒಕ್ಕೂಟ ಅಧ್ಯಕ್ಷೆ ಹೇಮಾ ಮಂಜುನಾಥ್, ಧರ್ಮಸ್ಥಳ ಯೋಜನೆ ಸಂಸ್ಥೆ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ, ಹೊಸದುರ್ಗ ಯೋಜನಾ ಸಂಸ್ಥೆ ಅಧ್ಯಕ್ಷ ಶಿವಣ್ಣ, ದೀಪಿಕಾ ಸತೀಶ್, ಸಿಂಧು, ಬಿ.ಪಿ. ಒಂಕಾರಪ್ಪ ಮತ್ತಿತರಿದ್ದರು.

Share this article