ರಾಯಚೂರು/ಸಿಂಧನೂರು: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ಎರಡನೇ ಹಂತದ ಅನಿರ್ದಿಷ್ಠಾವಧಿ ಪ್ರತಿಭಟನಾ ಧರಣಿ ನಡೆಸಿತು.
ರಾಯಚೂರು ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೇರಿದ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ಸದಸ್ಯರು ಕರ್ತವ್ಯವನ್ನು ಬಹಿಷ್ಕರಿಸಿ, ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು. ಸಿಂಧನೂರು ನಗರದ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಸಂಘದ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.ರಾಯಚೂರು ಅಧ್ಯಕ್ಷ ಸುರೇಂದ್ರ ಪಾಟೀಲ್ ಹಾಗೂ ಸಿಂಧನೂರು ಅಧ್ಯಕ್ಷ ವೀರೇಂದ್ರ ಮೇಟಿ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು. ರಾಜ್ಯದಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ವಾರಸುದಾರರ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳಿಲ್ಲದೆ ಪೌತಿ ದಾಖಲಿಸುವಂತೆ ಇ-ಪೌತಿ ಖಾತಾ ಆಂದೊಲನ ಚಾಲನೆ ನೀಡುತ್ತಿರುವುದನ್ನು ಕೈಬಿಡಬೇಕು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನೈಸರ್ಗಿಕ ನ್ಯಾಯ ತತ್ವಗಳು ಹಾಗೂ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶ ಹಿಂಪಡೆಯಬೇಕು. ಕಂದಾಯ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.ರಾಯಚೂರಿನ ಹೋರಾಟದಲ್ಲಿ ಸಂಘದ ಸದಸ್ಯರಾದ ಮಂಜುನಾಥ,ಸುರೇಶ,ಮೆಹಬೂಬ್,ಹನುಮೇಶ,ಗಂಗಪ್ಪ,ಶರಣ ಬಸವ ಸೇರಿ ಅನೇಕರು ಇದ್ದರು.
ಸಿಂಧನೂರಿನ ಧರಣಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಕಟ್ಟಿಮನಿ, ಗೌರವ ಅಧ್ಯಕ್ಷ ಸತೀಶ ಫರ್ಗೆ, ಉಪಾಧ್ಯಕ್ಷರಾದ ವೀಣಾ, ಛಾಗಪ್ಪ ಹೂಗಾರ, ಗಣೇಶ, ಸಹಕಾರ್ಯದರ್ಶಿಗಳಾದ ಸಿದ್ದು ಸಾಲಕ್ಕಿ, ಯಲ್ಲೇಶ್, ಮೌನೇಶ, ಹನುಮಂತ, ಹಬುಲೆಪ್ಪ, ಲಕ್ಷ್ಮಣ, ರಾಮಚಂದ್ರಪ್ಪ, ಶಿವಕುಮಾರ, ಬಂದೇನವಾಜ್, ಖಜಾಂಚಿ ಬಸವರಾಜ ಹಂದ್ರಾಳ ಇದ್ದರು.