ಕನ್ನಡಪ್ರಭ ವಾರ್ತೆ ಬೆಂಗಳೂರು
ಇದೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಕ್ಕೂ ಮೊದಲೇ ಫಲಿತಾಂಶ ಪ್ರಕಟಣೆಗೆ ಸಂಭಾವ್ಯ ದಿನಾಂಕವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರೇ ಪ್ರಕಟಿಸಿದ್ದರು. ಆದರೆ, ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಫಲಿತಾಂಶ ಪ್ರಕಟಣೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಮಂಡಳಿ ಅಧಿಕಾರಿಗಳು ಹೇಳುತ್ತಿರುವ ಪ್ರಕಾರ, ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಗೆ ಅನುಮತಿ ಕೋರಿ ಚುನಾವಣಾ ಯೋಗಕ್ಕೆ ಪತ್ರ ಬರೆಯಲಾಗಿದೆ. ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಹಾಗಾಗಿ ಏ.7ರಂದು ಫಲಿತಾಂಶ ಪ್ರಕಟಣೆ ಆಗುವುದಿಲ್ಲ. ಆದರೆ, ಮಂಗಳವಾರ ಆಯೋಗದಿಂದ ಪ್ರತಿಕ್ರಿಯೆ ಬಂದರೆ ಏ.8 ಬುಧವಾರ ಪ್ರಕಟಿಸಲಾಗುವುದೇ ಅಥವಾ ಇನ್ನೂ ವಿಳಂಬ ಆಗಲಿದೆಯೇ ಎನ್ನುವ ಬಗ್ಗೆ ಮಂಗಳವಾರ ಸಂಜೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ. ಆದರೆ ಆಯೋಗದ ಉನ್ನತ ಮೂಲಗಳ ಪ್ರಕಾರ ಫಲಿತಾಂಶ ಪ್ರಕಟಣೆಗೆ ಅಭ್ಯಂತರವಿಲ್ಲ ಎಂದು ಮಂಡಳಿ ಪತ್ರಕ್ಕೆ ಈಗಾಗಲೇ ಹಿಂಬರಹದ ಪ್ರತಿಕ್ರಿಯೆ ನೀಡಲಾಗಿದೆ. ಉಪಚುನಾವಣೆ ಮತದಾನ ಮುಗಿಯುವವರೆಗೂ ಸಚಿವರು ಲಭ್ಯವಾಗದ ಕಾರಣ ಫಲಿತಾಂಶ ಪ್ರಕಟಣೆ ಮುಂದೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.